ಮುಂಬೈ: ಧೂಳು ಬಿರುಗಾಳಿ ಮತ್ತು ಮಳೆಯಿಂದಾಗಿ ಮುಂಬೈನ ಫಾಟ್ಕೋಪರ್ ಪ್ರದೇಶದ ಪೆಟ್ರೋಲ್ ಪಂಪ್ ಮೇಲೆ 100 ಅಡಿ ಉದ್ದದ ಜಾಹೀರಾತು ಹೋರ್ಡಿಂಗ್ ಕುಸಿದು ಬಿದ್ದು 14 ಮಂದಿ ಸಾವನ್ನಪ್ಪಿ, 74ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ನಡೆದಿದೆ.
ಗಾಯಗೊಂಡವರಲ್ಲಿ 43 ಮಂದಿ ಗಂಭೀರ ಗಾಯಗೊಂಡಿರು ವುದಾಗಿ ಯೂ, ಉಳಿದವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಬಿಡುಗಡೆಗೊಳಿಸ ಲಾಯಿತೆಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಗೆ ಮಹಾರಾಷ್ಟ್ರ ಸರಕಾರ ತುರ್ತು ಆದೇಶ ನೀಡಿದೆ.
ನಿನ್ನೆ ಸಂಜೆ ವೇಳೆ ಈ ದುರ್ಘಟನೆ ನಡೆದಿದೆ. ಮುಂಬೈ ನಗರದಲ್ಲಿ ಧೂಳು ಮಿಶ್ರಿತ ಗಾಳಿಯ ವಾತಾವರಣ ನಿನ್ನೆ ಮಧ್ಯಾಹ್ನದಿಂದಲೇ ಇತ್ತು. ಸಂಜೆ ವೇಳೆಗೆ ಅದು ಬಿರುಗಾಳಿಯಾಗಿ ಮಾರ್ಪಟ್ಟು ಅದರ ರಭಸಕ್ಕೆ ಹೋರ್ಡಿಂಗ್ ಕುಸಿದು ಬಿದ್ದು ಈ ದುರ್ಘಟನೆ ನಡೆದಿದೆ. ಅಗ್ನಿಶಾಮಕ ದಳ, ಪೊಲೀಸರು ಮತ್ತಿತರ ರಕ್ಷಾಪಡೆಗಳು ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಈ ಕಾರ್ಯಾಚರಣೆ ನಿನ್ನೆ ತಡರಾತ್ರಿ ತನಕ ಮುಂದುವರಿದಿದೆ.
