ಬಸ್ನಲ್ಲಿ ದಾಖಲುಪತ್ರಗಳಿಲ್ಲದೆ ಸಾಗಿಸುತ್ತಿದ್ದ 10 ಲಕ್ಷ ರೂ. ಪತ್ತೆ: ಕೊಯಿಪ್ಪಾಡಿ ನಿವಾಸಿ ವಶ
ಬದಿಯಡ್ಕ: ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಬೆಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಖಾಸಗಿ ಬಸ್ನಲ್ಲಿ ಸರಿಯಾದ ದಾಖಲುಪತ್ರಗಳಿಲ್ಲದೆ ಸಾಗಿಸುತ್ತಿದ್ದ 10 ಲಕ್ಷ ರೂ. ನಗದು ಪತ್ತೆಹಚ್ಚಲಾಗಿದೆ. ಬದಿಯಡ್ಕ ಅಬಕಾರಿ ರೇಂಜ್ ಕಚೇರಿಯ ಅಬಕಾರಿ ಅಧಿಕಾರಿಗಳ ತಂಡ ನಿನ್ನೆ ಬದಿಯಡ್ಕ ಮತ್ತು ಆದೂರು ಎಂಬೆಡೆಗಳಲ್ಲಿ ವಾಹನ ತಪಾಸಣೆಯಲ್ಲಿ ತೊಡಗಿದ್ದ ವೇಳೆ ಆ ದಾರಿಯಾಗಿ ಬೆಂಗಳೂರಿನಿಂದ ಕಾಸರಗೋಡಿಗೆ ಬರತ್ತಿದ್ದ ಖಾಸಗಿ ಬಸ್ನ್ನು ತಡೆದು ನಿಲ್ಲಿಸಿ ತಪಾಸಣೆಗೊಳ ಪಡಿಸಿದಾಗ ಅದರಲ್ಲಿ ಈ ಹಣ ಪತ್ತೆಯಾಗಿದೆ. ಇದಕ್ಕೆ ಸಂಬಂಧಿಸಿ ಕುಂಬಳೆ ಸಮೀಪದ ಕೊಯಿಪ್ಪಾಡಿ ಕುಚ್ಯಾಳಂದ ಕೆ. ಅಬ್ದುಲ್ ಸಮದ್ (35) ಎಂಬಾತನನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡು ಬಳಿಕ ಹಣದ ಸಹಿತ ಆತನನ್ನು ಆದೂರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಪೊಲೀಸರು ಈ ಬಗ್ಗೆ ಮುಂದಿನ ಕ್ರಮ ಆರಂಭಿಸಿದ್ದಾರೆ. ವಶಪಡಿಸಲಾದ ಹಣವನ್ನು ನ್ಯಾ ಯಾಲಯದಲ್ಲಿ ಹಾಜರುಪಡಿಸಲಾ ಗುವುದೆಂದು ಪೊಲೀಸರು ತಿಳಿಸಿದ್ದಾರೆ.
ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಬದಿಯಡ್ಕ ಅಬಕಾರಿ ರೇಂಜ್ ಇನ್ಸ್ಪೆಕ್ಟರ್ ಸುಬಿನ್ ರಾಶಾ, ಆದೂರು ಅಬಕಾರಿ ತಪಾಸಣಾ ಕೇಂದ್ರದ ಸಿವಿಲ್ ಎಕ್ಸೈಸ್ ಆಫೀಸರ್ ಪ್ರಭಾಕರನ್, ವಿನೋದ್, ಸದಾನಂದನ್ ಮತ್ತು ಅಶ್ವತಿ ಎಂಬಿವರು ಒಳಗೊಂಡಿದ್ದರು.