ವಿಷ ಪ್ರಾಶನಗೈದಿರುವುದಾಗಿ ಪೋಕ್ಸೋ ಪ್ರಕರಣದ ಆರೋಪಿಯ ಹೇಳಿಕೆ: ಆಸ್ಪತ್ರೆಗೆ ದಾಖಲು
ಕಾಸರಗೋಡು: ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾದ ಆರೋಪಿ ತಾನು ವಿಷ ಪ್ರಾಶನಗೈದಿರುವುದಾಗಿ ಮೆಜಿಸ್ಟ್ರೇಟರ್ರಲ್ಲಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಆತನನ್ನು ಬಳಿಕ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ದೂರಿನಂತೆ ಈ ವ್ಯಕ್ತಿ ವಿರುದ್ಧ ಮೇಲ್ಪರಂಬ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿ, ಬಳಿಕ ಮೆಜಿಸ್ಟ್ರೇಟರ್ ಮುಂದೆ ಹಾಜರುಪಡಿಸಿದ್ದರು. ಆಗ ಆತ ಆತ್ಮಹತ್ಯೆಗೈಯ್ಯಲು ಪ್ರಯತ್ನಿಸಿರುವುದಾಗಿ ಆತ ಮೆಜಿಸ್ಟ್ರೇಟರ್ರಲ್ಲಿ ಹೇಳಿಕೆ ನೀಡಿದ್ದನು. ಅದರಂತೆ ಆತನನ್ನು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಆದರೆ ಪ್ರಾಥಮಿಕ ತಪಾಸಣೆಯಲ್ಲಿ ಆತ ವಿಷ ಸೇವಿಸಿದ ಯಾವುದೇ ಲಕ್ಷಣಗಳೂ ಪತ್ತೆಯಾಗಿಲ್ಲವೆಂದು ವೈದ್ಯರು ಪೊಲೀಸರಲ್ಲಿ ತಿಳಿಸಿದ್ದಾರೆ. ಇದರಿಂದ ತಜ್ಞ ಆರೋಗ್ಯ ತಪಾಸಣೆಗಾಗಿ ಆತನನ್ನು ಬಳಿಕ ಪರಿಯಾರಂ ವೈದ್ಯಕೀಯ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು.