ಐಎಸ್‌ಆರ್‌ಒ ಪರೀಕ್ಷೆಯಲ್ಲಿ ವಂಚನೆ ಪತ್ತೆ
ತಿರುವನಂತಪುರ: ತಿರುವನಂತಪುರ ದಲ್ಲಿ ನಿನ್ನೆ ನಡೆದ ಐಎಸ್‌ಆರ್‌ಒದ ವಿಎಸ್‌ಎಸ್‌ಸಿ ಟೆಕ್ನೀಶಿಯನ್ ಹುದ್ದೆಗಿರುವ ಪರೀಕ್ಷೆಯಲ್ಲಿ ಭಾರೀ ವಂಚನೆ, ವ್ಯಕ್ತಿಪಲ್ಲಟ ನಡೆದಿರುವುದಾಗಿ ಪತ್ತೆಹಚ್ಚಲಾಗಿದೆ. ಈ ಸಂಬಂಧ ಹರ್ಯಾಣ ನಿವಾಸಿಗಳಾದ ಇಬ್ಬರನ್ನು ಸೆರೆಹಿಡಿಯಲಾಗಿದೆ. ಇವರು ಬ್ಲೂ ಟೂತ್ ಮೂಲಕ ಶಬ್ದ ಆಲಿಸಿ ಇವರು ಪರೀಕ್ಷೆ ಬರೆದಿದ್ದಾರೆಂದು ಹೇಳಲಾಗುತ್ತಿದೆ. ಅನಂತರ ನಡೆಸಿದ ತನಿಖೆಯಲ್ಲಿ ಇನ್ನಷ್ಟು ವಂಚನೆ ಬೆಳಕಿಗೆ ಬಂದಿದೆ. ವ್ಯಕ್ತಿ ಪಲ್ಲಟ ನಡೆಸಿ ಉದ್ಯೋಗಾರ್ಥಿಗಾಗಿ ಬೇರೊಬ್ಬ ಪರೀಕ್ಷೆ ಬರೆದಿರುವುದಾಗಿಯೂ ಪತ್ತೆಹಚ್ಚಲಾಗಿದೆ. ಸೆರೆಗೀಡಾದವರ ವಿಳಾಸ ಪತ್ತೆಹಚ್ಚಲು ಹರ್ಯಾಣ ಪೊಲೀಸರ ಸಹಾಯದಿಂದ ಕೇರಳ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕೇಂದ್ರ ಏಜೆನ್ಸಿಗಳು ಕೂಡಾ ತನಿಖೆ ಆರಂಭಿಸಿವೆ. ಈ ವಂಚನೆಯ ಮುಖ್ಯ ಆರೋಪಿ ಹರ್ಯಾಣ ನಿವಾಸಿಯೂ, ಕೋಚಿಂಗ್ ಸೆಂಟರ್ ನಡೆಸುತ್ತಿರುವ ವ್ಯಕ್ತಿಯಾಗಿದ್ದಾನೆಂದು ತಿಳಿದುಬಂದಿದೆ.