ವಿದ್ಯುತ್ ನಿಯಂತ್ರಣ: ತೀರ್ಮಾನ ಇಂದು
ತಿರುವನಂತಪುರ: ಮುಂಗಾರು ಮಳೆ ಕೈಕೊಟ್ಟಿರುವ ಪರಿಣಾಮ ರಾಜ್ಯದಲ್ಲಿ ತೀವ್ರ ವಿದ್ಯುತ್ ಸಂದಿಗ್ಧಾವಸ್ಥೆ ಸೃಷ್ಟಿ ಯಾಗಿರುವ ಹಿನ್ನೆಲೆಯಲ್ಲಿ ವಿದ್ಯುತ್ ನಿಯಂತ್ರಣ ಹೇರಬೇಕೇ ಎಂಬುವುದರ ಬಗ್ಗೆ ಇಂದು ತೀರ್ಮಾನ ಉಂಟಾಗ ಲಿದೆ. ಈ ತಿಂಗಳು ಸುರಿಯುವ ಮಳೆ ಪ್ರಮಾಣಕ್ಕೆ ಹೊಂದಿಕೊಂಡು ವಿದ್ಯುತ್ ನಿಯಂತ್ರಣ ಏರ್ಪಡಿಸುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡರೆ ಸಾಕೆಂಬ ನಿಲುವನ್ನು ವಿದ್ಯುತ್ ಖಾತೆ ಸಚಿವರು ಈಗಾಗಲೇ ವ್ಯಕ್ತಪಡಿಸಿದ್ದಾರೆ.
ಹೊರಗಿನಿಂದ ಹೆಚ್ಚು ದರಕ್ಕೆ ವಿದ್ಯುತ್ ಖರೀದಿಸುತ್ತಿರುವುದರಿಂದ ಮಂಡಳಿಗೆ ಉಂಟಾಗುವ ಹೆಚ್ಚುವರಿ ಆರ್ಥಿಕ ಹೊರೆಯನ್ನು ಸರ್ಚಾರ್ಜ್ ಮೂಲಕ ವಿದ್ಯುತ್ ಬಳಕೆದಾರರಿಂದ ವಸೂಲಿ ಮಾಡುವ ತೀರ್ಮಾನ ಇಂದಿನ ಸಭಯಲ್ಲಿ ಉಂಟಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ವಿದ್ಯುತ್ ಬಿಕ್ಕಟ್ಟಿನ ಬಗ್ಗೆ ಚರ್ಚೆ ನಡೆಸಲು ಇಂದು ಸಂಜೆ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆಯಲಾಗಿದೆ. ವಿದ್ಯುತ್ ಲೋಡ್ ಶೆಡ್ಡಿಂಗ್ ಮತ್ತು ಪವರ್ಕಟ್ ಇತ್ಯಾದಿ ನಿಯಂತ್ರಣ ಹೇರಬೇಕೆ ಎಂಬ ಬಗ್ಗೆ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಇದೇ ವೇಳೆ ಸದ್ಯ ಕಠಿಣ ತೀರ್ಮಾನ ಕೈಗೊಳ್ಳುವ ಸಾಧ್ಯತೆ ವಿರಳವೆಂದೂ ಹೇಳಲಾಗುತ್ತಿದೆ. ಸಭೆಯಲ್ಲಿ ವಿದ್ಯುತ್ ಸಚಿವ ಕೆ. ಕೃಷ್ಣನ್ ಕುಟ್ಟಿ ಭಾಗವಹಿಸುವರು. ವಿದ್ಯುನ್ಮಂಡಳಿ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ.