ಯುವತಿಯರ ಮೋರ್ಫ್‌ಗೈದ ನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣದ ಮೂಲಕ ರವಾನೆ: ಮೂವರು ಯುವಕರ ಸೆರೆ
ಕಾಸರಗೋಡು: ವಿದ್ಯಾರ್ಥಿನಿ ಯರು ಸೇರಿದಂತೆ ನೂರಾರು ಯುವತಿಯರ ಫೋಟೋಗಳ ಮುಖ ಭಾಗವನ್ನು ಬಳಸಿ ಮೋರ್ಫ್ ಗೈದ ನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ರವಾನಿಸುತ್ತಿದ್ದ ಪ್ರಕರಣದ ಮೂವರು ಯುವಕರನ್ನು ಚಿತ್ತಾರಿಕಲ್ ಪೊಲೀಸರು ಬಂಧಿಸಿದ್ದಾರೆ.
ಈಸ್ಟ್ ಎಳೇರಿ ಪಂಚಾಯತ್‌ತ್‌ನ ತಯ್ಯೇನಿ ನಿವಾಸಿಗಳಾದ ಸಿಬಿನ್ ಲೂಕೋಸ್ (21), ಎಬಿನ್ ಟೋಮ್ ಜೋಸೆಫ್ (19), ಮತ್ತು ಜಸ್ಟಿನ್ ಜೇಕಬ್ (21) ಎಂಬವರು ಬಂಧಿತರಾದ ಯುವಕರು.
ಮೋರ್ಫ್ ಗೈಯ್ಯಲಾದ ಯುವತಿಯರ ನಗ್ನ ಫೋಟೋಗಳನ್ನು ಟೆಲಿಗ್ರಾಂ ಆಪ್, ಫೇಸ್‌ಬುಕ್, ವಾಟ್ಸಪ್ ಮೂಲಕ ತಮ್ಮ ಸ್ನೇಹಿತರು ಮತ್ತಿತರರಿಗೆ ಬಂಧಿತ ಆರೋಪಿಗಳು ರವಾನಿಸುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಈ ರೀತಿ ಮೋರ್ಫ್‌ಗೈ ಯ್ಯಲಾದ ಫೋಟೋಗಳನ್ನು ಗಮನಿಸಿದ ಕೆಲವರು ಆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ ಆ ಬಗ್ಗೆ ಲಿಖಿತ ದೂರು ನೀಡಲು ಮೊದಲು ಯಾರೂ ತಯಾರಾಗಲಿಲ್ಲ. ಬಳಿಕ ಓರ್ವರು ಆ ಬಗ್ಗೆ ದೂರು ನೀಡಲು ಮುಂದಾದರು. ಅದರಂತೆ ಪೊಲೀಸರು ಸೈಬರ್ ಸೆಲ್ ಸಹಾಯದಿಂದ ತನಿಖೆ ನಡೆಸಿ ಈ ಮೂವರು ಯುವಕರನ್ನು ಸೆರೆ ಹಿಡಿದು ಅವರ ವಿರುದ್ಧ ಐ.ಟಿ. ಆಕ್ಟ್ ೬೭-ಎ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತರು ಕೆಲವು ಸಿನೆಮಾ ನಟಿಯರ ಫೋಟೋಗಳನ್ನು ಈ ರೀತಿ ಮೋರ್ಫ್ ಮಾಡಿ ರವಾನಿಸಿದ್ದಾರೆಂದು ತನಿಖೆಯಲ್ಲಿ ಪತ್ತೆಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.