ರಾಜ್ಯದ ಅತ್ಯಂತ ದೊಡ್ಡ ಎಂಡಿಎಂಎ ಬೇಟೆ : ಮಾದಕದ್ರವ್ಯ ಸಹಿತ ಪಯ್ಯನ್ನೂರು ನಿವಾಸಿ ಸೆರೆ
ತೃಶೂರು: ಎರಡೂವರೆ ಕಿಲೋ ಎಂಡಿಎಂಎ ಸಹಿತ ತೃಶೂರ್‌ನಲ್ಲಿ ಓರ್ವನನ್ನು ಸೆರೆ ಹಿಡಿಯಲಾಗಿದೆ. ಕಣ್ಣೂರು ಪಯ್ಯನ್ನೂರು ನಿವಾಸಿ ಫಾಸಿಲ್‌ನನ್ನು ಸಿಟಿ ಪೊಲೀಸ್ ಹಾಗೂ ಜಿಲ್ಲಾ ಪೊಲೀಸ್ ತಂಡ ಸೆರೆ ಹಿಡಿದಿದೆ. ಈತನಿಂದ 9000 ಎಂಡಿಎಂಎ ಮಾತ್ರೆಗಳನ್ನು ಪತ್ತೆಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೇರಳದಲ್ಲೇ ಅತ್ಯಂತ ದೊಡ್ಡ ಎಂಡಿಎಂಎ ಬೇಟೆ ಇದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
3 ಕೋಟಿಯಷ್ಟು ರೂ. ಇದಕ್ಕೆ ಮೌಲ್ಯ ಅಂದಾಜಿಸಲಾಗಿದ್ದು, ತೃಶೂರು ಕೇಂದ್ರೀಕರಿಸಿ ಮಾದಕ ಪದಾರ್ಥ ಸಾಗಾಟ ನಡೆಯುತ್ತಿದೆ ಎಂಬ ರಹಸ್ಯ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಮಂಗಳವಾರ ರಾತ್ರಿ ಒಲ್ಲೂರ್‌ನಲ್ಲಿ ವಾಹನ ತಪಾಸಣೆ ಮಧ್ಯೆ ಫಾಸಿಲ್‌ನನ್ನು ಸೆರೆ ಹಿಡಿಯಲಾಗಿದೆ. ಕಾರಿನಲ್ಲಿ ಎಂಡಿಎಂಎ ಮಾತ್ರೆಗಳನ್ನು ಪತ್ತೆಹಚ್ಚಲಾಗಿದ್ದು, ಬಳಿಕ ಈತನ ಮನೆಯಲ್ಲಿ ನಡೆಸಿದ ತಪಾಸಣೆಯಲ್ಲೂ ಹಲವಾರು ಮಾತ್ರೆಗಳನ್ನು ವಶಪಡಿಸಲಾಗಿದೆ. ಇವುಗಳೆಲ್ಲ ಸೇರಿ ಎರಡೂವರೆ ಕಿಲೋ ತೂಕ ಅಂದಾಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಫಾಸಿಲ್ ಎಂಡಿಎಂಎ ರಖಂ ವಿತರಣೆದಾರನಾಗಿದ್ದಾನೆಂದು ತಿಳಿಸಿದ್ದಾರೆ. ಗೋವಾದಿಂದ ಭಾರೀ ಪ್ರಮಾಣದಲ್ಲಿ ಊರಿಗೆ ತಲುಪಿಸಿ ಮಾರಾಟ ಮಾಡುವುದು ಈತನ ಕೆಲಸವೆಂದು ಪೊಲೀಸರು ನುಡಿದರು.