ಏರ್ ಇಂಡಿಯಾ ಹೈಜಾಕ್ ಮಾಡಿದ್ದ ಮೋಸ್ಟ್ ವಾಂಟೆಡ್ ಖಾಲಿಸ್ತಾನಿ ಉಗ್ರ ಪಾಕಿಸ್ತಾನದಲ್ಲಿ ನಿಗೂಢ ಸಾವು
ನವದೆಹಲಿ: 1981ರಲ್ಲಿ ಇಂಡಿಯನ್ ಏರ್‌ಲೈನ್ಸ್ ವಿಮಾನವನ್ನು ಹೈಜಾಕ್ ಮಾಡಿದ ಮೋಸ್ಟ್ ವಾಂಟೆಡ್ ಖಾಲಿಸ್ತಾನಿ ಉಗ್ರ ಗಜೀಂದ್ರ ಸಿಂಗ್ ಪಾಕಿಸ್ಥಾನದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾನೆ.
ಖಾಲಿಸ್ತಾನಿ ದಾಲ್ ಖಾಲ್ಸಾ ಸಂಸ್ಥಾಪಕ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆಯ ಬಂಧನವನ್ನು ವಿರೋಧಿಸಿ 1980 ಸೆಪ್ಟಂಬರ್ 29ರಂದು ದಿಲ್ಲಿಯಿಂದ ಅಮೃತಸರಕ್ಕೆ ಹೊರಬಿದ್ದ ಇಂಡಿಯನ್ ಏರ್‌ಲೈನ್ಸ್ ವಿಮಾನವನ್ನು ಹೈಜಾಕ್ ಮಾಡಿ ಅದನ್ನು ಪಾಕಿಸ್ತಾನದ ಲಾಹೋರ್‌ನಲ್ಲಿ ಇಳಿಸಲು ಖಾಲಿಸ್ತಾನ ಉಗ್ರರು ಒತ್ತಾಯಿಸಿದ್ದರು. ಇದಾದ ನಂತರ ಭಯೋತ್ಪಾದಕರು ಭಿಂದ್ರನ್ ವಾಲೆ ಮತ್ತು ಇತರ ಉಗ್ರರನ್ನು ಬಿಡುಗಡೆ ಮಾಡುವುದರ ಜೊತೆಗೆ ಭಾರತ ಸರಕಾರದಿಂದ ಐದು ಲಕ್ಷ ಯು.ಎಸ್. ಡಾಲರ್‌ಗಾಗಿ ಬೇಡಿಕೆಯನ್ನು ಇಟ್ಟಿದ್ದರು. ಈ ಹೈಜಾಕ್ ಪ್ರಕರಣದಲ್ಲಿ ಗಜಿಂದರ್ ಸಿಂಗ್ ಪ್ರಧಾನ ಆರೋಪಿಗಳಲ್ಲೋರ್ವನಾಗಿದ್ದಾನೆ. ಈತನಿಗಾಗಿ ಭಾರತೀಯ ಭದ್ರತಾ ಏಜೆನ್ಸಿಗಳು ಅಂದಿನಿಂದಲೇ ಶೋಧ ಆರಂಭಿಸಿ ಆತನನ್ನು ದಿ ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿಯಲ್ಲಿ ಒಳಪಡಿಸಿದ್ದರು.
ಹೈಜಾಕ್ ಘಟಕ ನಡೆದ ಬಳಿಕ ಗಜೀಂದ್ರ ಸಿಂಗ್ ಜರ್ಮನಿಗೆ ಪಲಾಯನ ಮಾಡಿದ್ದು, ಅದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಅದರಿಂದಾಗಿ ಜರ್ಮನಿ ಆತನಿಗೆ ಪ್ರವೇಶ ನಿರಾಕರಿಸಿತ್ತು. ಅದಾದ ನಂತರ ಆತ ಪಾಕಿಸ್ತಾನಕ್ಕೆ ಹೋಗಿ ಅಲ್ಲಿನ ಪಂಜಾಬ್ ಪ್ರಾಂತ್ಯದ ಹಲ್ಸ ಅಬ್ದುಲ್ ಪ್ರದೇಶದಲ್ಲಿ ಖಾಯಂ ಆಗಿ ನೆಲೆಯೂರಿ ಅಲ್ಲಿಂದ ಭಾರತ ವಿರೋಧ ಚಟುವಟಿಕೆ ಮುಂದುವರಿಸುತ್ತಿದ್ದ ಆತ ಈಗ ಅಲ್ಲೇ ಸಾವನ್ನಪ್ಪಿದ್ದು, ಸಾವಿನ ಕಾರಣವನ್ನು ಪಾಕಿಸ್ತಾನ ಇನ್ನೂ ಬಯಲು ಪಡಿಸಿಲ್ಲ. ಮೃತದೇಹದ ಅಂತ್ಯ ಸಂಸ್ಕಾರವನ್ನು ಅಲ್ಲೇ ಗುಪ್ತವಾಗಿ ನೆರವೇರಿಸಲಾಗಿದೆ ಎಂದು ತಿಳಿದು ಬಂದಿದೆ. ಭಾರತಕ್ಕೆ ಬೇಕಾಗಿದ್ದ ಹಲವು ಭಯೋತ್ಪಾದಕರನ್ನು ಅಪರಿಚಿತ ವ್ಯಕ್ತಿಗಳು ಪಾಕಿಸ್ತಾನದಲ್ಲೇ ಈಗಾಗಲೇ ಹತ್ಯೆಗೈದಿದ್ದಾರೆ. ಆ ಪೈಕಿ ಕೆಲವು ಉಗ್ರರು ಗುಂಡೇಟಿಗೆ ಬಲಿಯಾದರೆ, ಇನ್ನೂ ಕೆಲವರು ವಿಷಪ್ರಾಶನಕ್ಕೊಳಗಾಗಿ ಸಾವನ್ನಪ್ಪಿದ್ದರು.