ಮೇರು ಕಲಾವಿದ ಕುಂಬಳೆ ಶ್ರೀಧರ ರಾಯರಿಗೆ ಹುಟ್ಟೂರಲ್ಲಿ ಶ್ರದ್ಧಾಂಜಲಿ
ಕುಂಬಳೆ: ತೆಂಕುತಿಟ್ಟು ಯಕ್ಷಗಾನದಲ್ಲಿ ಆರು ದಶಕಗಳ ಕಾಲ ತಿರುಗಾಟ ನಡೆಸಿದ ಕುಂಬಳೆ ಶ್ರೀಧರ ರಾಯರ ಅಗಲುವಿಕೆ ಹಿನ್ನೆಲೆಯಲ್ಲಿ ಹುಟ್ಟೂರು ಕುಂಬಳೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪಾರ್ಥಿಸುಬ್ಬ ಯಕ್ಷಗಾನ ಕಲಾಸಂಘ ಶೇಡಿಕಾವು ನೇತೃತ್ವದಲ್ಲಿ ಸಂಘದ ಕಚೇರಿಯಲ್ಲಿ ನಡೆದ ಶ್ರದ್ಧಾಂಜಲಿ, ತಾಳಮದ್ದಳೆ ಕಾರ್ಯಕ್ರಮವನ್ನು ವೇದಮೂರ್ತಿ ಹರಿನಾರಾಯಣ ಅಡಿಗ ಕುಂಬಳೆ, ನಾರಾಯಣ ಅಡಿಗ ಶೇಡಿಕಾವು ಜಂಟಿಯಾಗಿ ದೀಪ ಬೆಳಗಿಸಿ ಉದ್ಘಾಟಿಸಿದರು. ಲೇಖಕ ಎಂ.ನಾ. ಚಂಬಲ್ತಿಮಾರ್ ಸಂಸ್ಮರಣಾ ಭಾಷಣ ಮಾಡಿದರು. ಅರ್ಥದಾರಿ ಪಕಳಕುಂಜ ಶ್ಯಾಮ್ ಭಟ್, ಕಲಾವಿದ ದಿವಾಣ ಶಿವಶಂಕರ ಭಟ್, ಶ್ರೀಧರ ರಾಯರ ಸಹೋದರ ಗೋಪಾಲ ನುಡಿನಮನ ಸಲ್ಲಿಸಿದರು. ‘ಜಟಾಯು ಮೋಕ್ಷ’, ‘ವಾಲಿ ಮೋಕ್ಷ’ ಕಥಾಭಾಗದ ಯಕ್ಷಗಾನ ತಾಳಮದ್ದಳೆ ಜರಗಿತು. ಖ್ಯಾತ ಕಲಾವಿದರು ಭಾಗವಹಿಸಿದರು.
ಸಂಘದ ಸಂಚಾಲಕ ಅಶೋಕ ಕುಂಬಳೆ ಸ್ವಾಗತಿಸಿ, ಸುಜನಾ ಶಾಂತಿಪಳ್ಳ ವಂದಿಸಿದರು. ವಿಶ್ವನಾಥ ರೈ ಮಾನ್ಯ ಸಹಿತ ಹಲವು ಗಣ್ಯರು ಭಾಗವಹಿಸಿದರು.