ಮಾನಂತವಾಡಿಯಲ್ಲಿ ಜೀಪು ಕಂದಕಕ್ಕೆ ಉರುಳಿ ೯ ಮಂದಿ ಮೃತ್ಯು
ವಯನಾಡು: ಮಾನಂತವಾಡಿಯ ಸಮೀಪ ನಿನ್ನೆ ಸಂಜೆ ಸಂಭವಿಸಿದ ಭೀಕರ ವಾಹನ ಅಪಘಾತ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಅಪಘಾತದಲ್ಲಿ ೯ ಮಂದಿ ಮೃತಪಟ್ಟಿದ್ದು, ಐದು ಮಂದಿ ಗಾಯಗೊಂಡಿದ್ದಾರೆ.
ಮಾನಂತವಾಡಿ ತವಿಂಞಲ್ ಕಣ್ಣೋತುಮಲ ಎಂಬಲ್ಲಿ ನಿಯಂತ್ರಣ ತಪ್ಪಿದ ಜೀಪು ೨೫ ಮೀಟರ್ ಆಳದ ಕಂದಕಕ್ಕೆ ಉರುಳಿ ಈ ಅಪಘಾತ ಸಂಭ ವಿಸಿದೆ. ಚಹಾ ತೋಟದ ಕಾರ್ಮಿಕ ರಾದ ಮಾನಂತವಾಡಿ ಮಕ್ಕಿಮಲ ನಿವಾಸಿಗಳಾದ ಕುಳನ್‌ತೋಡಿಯಿಲ್ ಲೀಲ (೪೨), ಕುಕ್ಕೋಟಿಲ್ ಶೋಭನ (೫೪), ಕಾಪಿಲ್ ರಾಬಿಯಾ (೫೩), ಪಂಚಮಿ ವೀಟಿಲ್ ಶಾಜ(೪೨), ಶಾಂತ (೫೫), ಶಾಂತರ ಪುತ್ರಿ ಚಿತ್ರ (೩೩), ಕಾರ್ತ್ಯಾಯಿನಿ (೬೨), ರಾಣಿ (೫೭), ಚೆನ್ನಮ್ಮ (೫೫) ಎಂಬಿವರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಗಂಭೀರ ಗಾಯಗೊಂಡ ಲತಾ (೩೮)ರನ್ನು ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ, ಜೀಪು ಚಾಲಕ ಮಣಿ ಕಂಠನ್ (೪೪), ಉಮಾದೇವಿ (೪೩), ಜಯಂತಿ (೪೫), ಮೋಹನ ಸುಂದರಿ (೩೨) ಎಂಬಿವರನ್ನು ಮಾನಂತವಾ ಡಿಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ನಿನ್ನೆ ಅಪರಾಹ್ನ ೩.೩೦ರ ವೇಳೆ ಮಾನಂತವಾಡಿ ವಾಳಾಡ್ ರಸ್ತೆಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ವಾಳಾಡಿ ಎಂಬಲ್ಲಿಗೆ ಸಮೀಪದ ಚಹಾ ತೋಟದ ಕಾರ್ಮಿಕರಾದ ಇವರು ಕೆಲಸ ಮುಗಿಸಿ ಮನೆಗಳಿಗೆ ಮರಳುತ್ತಿದ್ದಾಗ ಜೀಪು ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದೆ. ಜೀಪಿನಲ್ಲಿ ಒಟ್ಟು ೧೪ ಮಂದಿಯಿದ್ದರು. ಅಪಘಾತ ಸಂಭವಿಸಿದ ಸ್ಥಳ ಜನವಾಸವಿಲ್ಲದ್ದಾಗಿದ್ದು, ಇದರಿಂದ ಜೀಪು ಕಂದಕಕ್ಕೆ ಬಿದ್ದಿರುವುದು ಯಾರಿಗೂ ತಿಳಿದಿರಲಿಲ್ಲ. ದೀರ್ಘ ಹೊತ್ತಿನ ಬಳಿಕ ವಿಷಯ ತಿಳಿದು ನಾಗರಿಕರು ಹಾಗೂ ಪೊಲೀಸರು ಸ್ಥಳಕ್ಕೆ ತಲುಪಿ ರಕ್ಷಣಾ ಚಟುವಟಿಕೆ ಆರಂಭಿಸಲಾಗಿದೆ.