ಅಡೂರು: ನವಜಾತ ಶಿಶುವನ್ನು ಉಪೇಕ್ಷಿಸಿದ ಮಹಿಳೆಯ ಗುರುತು ಪತ್ತೆ
ಅಡೂರು: ಅಡೂರು ಪಂಜಿಕಲ್ ಶ್ರೀಕೃಷ್ಣಮೂರ್ತಿ ಎಯುಪಿ ಶಾಲೆಯ ವರಾಂಡದಲ್ಲಿ ಮೊನ್ನೆ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾದ ಒಂದು ದಿನ ಪ್ರಾಯದ ಹೆಣ್ಣುಮಗುವಿನ ತಾಯಿಯನ್ನು ಗುರುತು ಹಚ್ಚುವಲ್ಲಿ ಆದೂರು ಪೊಲೀಸರು ಸಫಲರಾಗಿದ್ದಾರೆ. ಮಗುವನ್ನು ಉಪೇಕ್ಷಿಸಿದ ಘಟನೆಗೆ ಸಂಬಂಧಿಸಿ ಆದೂರು ಪೊಲೀಸರು ದೇಲಂಪಾಡಿಯಾದ್ಯಂತ ಎಲ್ಲಾ ಮನೆಗಳಲ್ಲೂ ಶೋಧ ನಡೆಸಿದ್ದರು. ಆಗ ಆ ಪ್ರದೇಶದ ಮನೆಯೊಂದರಲ್ಲಿ ೩೨ರ ಹರೆಯದ ಯುವತಿಯೋರ್ವೆ ಗಂಬೀರಾವಸ್ಥೆಯಲ್ಲಿ ಪತ್ತೆಯಾಗಿದ್ದಾಳೆ. ಶಂಕೆಗೊಂಡ ಪೊಲೀಸರು ಆಕೆಯನ್ನು ವಿಚಾರಿಸಿದಾಗ ಉಪೇಕ್ಷಿಸಲ್ಪಟ್ಟ ಮಗುವಿನ ತಾಯಿ ತಾನೇ ಆಗಿರುವುದಾಗಿ ಆಕೆ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅದಕ್ಕೆ ಸಂಬಂಧಿಸಿ ಪೊಲೀಸರು ಮುಂದಿನ ಕ್ರಮ ಆರಂಭಿಸಿದ್ದಾರೆ.
ಇದೇ ವೇಳೆ ಕರ್ನಾಟಕ ಗಡಿ ಪ್ರದೇಶಕ್ಕೆ ತಾಗಿಕೊಂಡಿರುವ ಪ್ರದೇಶದಲ್ಲಿ ವಯನಾಡ್‌ನಲ್ಲಿ ಮಾವೋವಾದಿ ಸದಸ್ಯೆಯೋರ್ವೆ ಮಗುವಿಗೆ ಜನ್ಮ ನೀಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಆಕೆ ಜನ್ಮ ನೀಡಿರುವ ಮಗುವನ್ನು ಪಂಜಿಕಲ್ ಶಾಲಾ ವರಾಂಡದಲ್ಲಿ ಉಪೇಕ್ಷಿಸಿರಬಹುದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದರು. ಆ ಬಗ್ಗೆ ಕರ್ನಾಟಕ ಮತ್ತು ಕೇರಳ ಗುಪ್ತಚರ ವಿಭಾಗ ಸಮಗ್ರ ತನಿಖೆ ಆರಂಭಿಸಿತ್ತು. ಆದರೆ ಪಂಜಿಕಲ್‌ನಲ್ಲಿ ಪತ್ತೆಯಾದ ಮಗುವಿನ ತಾಯಿಯನ್ನು ಪತ್ತೆಹಚ್ಚಲಾಗಿರುವ ಹಿನ್ನೆಲೆಯಲ್ಲಿ ಮಾವೋವಾದಿ ಯುವತಿಯ ಕುರಿತಾದ ತನಿಖೆಯನ್ನು ಪೊಲೀಸರು ಬಳಿಕ ಅಲ್ಲಿಗೇ ಕೊನೆಗೊಳಿಸಿದರು.