ಮಾಯಿಪ್ಪಾಡಿ: ಅಡುಗೆ ಕೊಠಡಿಯಲ್ಲಿ ಸ್ವಿಚ್ ಹಾಕುವಾಗ ವಿದ್ಯುತ್ ಶಾಕ್ ತಗಲಿ ಗೃಹಿಣಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಮಾಯಿಪ್ಪಾಡಿಗೆ ಸಮೀಪದ ಕುದ್ರೆಪ್ಪಾಡಿಯಲ್ಲಿ ನಡೆದಿದೆ.
ಕುದ್ರೆಪ್ಪಾಡಿ ಕಾರ್ತಿಕ ನಿಲಯದ ಗೋಪಾಲ ಗಟ್ಟಿ ಎಂಬಿವರ ಪತ್ನಿ ಹೇಮಾವತಿ (53) ಸಾವನ್ನಪ್ಪಿದ ದುರ್ದೈವಿ. ಇವರು ತಮ್ಮ ಮನೆಗೆ ತಾಗಿಕೊಂಡು ಅಡುಗೆ ಕೆಲಸಕ್ಕಾಗಿ ಪ್ರತ್ಯೇಕವಾಗಿ ನಿರ್ಮಿಸಲಾಗಿದ್ದ ಕೊಠಡಿಯಲ್ಲಿ ಅಡುಗೆ ಕೆಲಸಕ್ಕಾಗಿ ನಿನ್ನೆ ರಾತ್ರಿ ಸುಮಾರು 7.30ಕ್ಕೆ ಹೋಗಿ ಅಲ್ಲಿನ ಲೈಟ್‌ನ ಸ್ವಿಚ್ ಹಾಕುತ್ತಿದ್ದ ವೇಳೆ ಅವರಿಗೆ ವಿದ್ಯುತ್ ಶಾಕ್ ತಗಲಿದೆ. ತಕ್ಷಣ ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲಾಯಿತಾದರೂ ಅದು ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.
ಮನೆಗೆ ತಾಗಿಕೊಂಡು ನಿರ್ಮಿಸಲಾದ ಅಡುಗೆ ಕೊಠಡಿಗೆ ಮನೆಯಿಂದ ಪ್ರತ್ಯೇಕ ವಯರ್‌ನಿಂದ ಎಳೆದು ವಿದ್ಯುತ್ ಬಲ್ಬ್ ಅಳವಡಿಸಲಾಗಿತ್ತು. ಆ ವಯರಿನಿಂದ ಮಳೆ ನೀರು ಸ್ವಿಚ್‌ಗೆ ಹರಿದು ಅದರಿಂದ ವಿದ್ಯುತ್ ಶಾಕ್ ತಗಲಿರಬಹುದೆಂದು ಹೇಳಲಾಗುತ್ತಿದೆ.
ಬಂಟಪ್ಪ ಗಟ್ಟಿ- ಕಮಲ ದಂಪತಿ ಪುತ್ರಿಯಾಗಿರುವ ಮೃತ ಹೇಮಾವತಿ ಮಾಯಿಪ್ಪಾಡಿ ಕಿನ್‌ಫ್ರಾದಲ್ಲಿರುವ ಇಂಟರ್‌ಲಾಕ್ ಕಾರ್ಖಾನೆಯೊಂದರ ಅಡುಗೆ ಕಾರ್ಮಿಕೆಯಾಗಿ ದುಡಿಯುತ್ತಿ ದ್ದರು. ಕೂಲಿ ಕಾರ್ಮಿಕನಾಗಿರುವ ಅವರ ಪತಿ ಕಿಡ್ನಿಗೆ ಸಂಬಂಧಿಸಿದ ಕಾಯಿಲೆಯಿಂದ ಬಲುತ್ತಿದ್ದು, ಅದರಿಂದಾಗಿ ಈಗ ಕೆಲಸಕ್ಕೆ ಹೋಗಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ.
ಮೃತರು ಮಕ್ಕಳಾದ ಬಿಎಂಎಸ್ ಕಾರ್ಯಕರ್ತ ಅಜಿತ್ ಗಟ್ಟಿ, ಅವಿನಾಶ್ ಗಟ್ಟಿ, ಅಕ್ಷಯಾ, ಸಹೋದರ ಸಹೋದರಿಯರಾದ ರಮಾನಾಥ, ಮಾಲಿನಿ, ಚಂಚಲ, ವತ್ಸಲ ಶಿವಪ್ರಸಾದ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ವಿದ್ಯಾನಗರ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಮೃತದೇಹವನ್ನು ಬಳಿಕ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಯಿತು.