ಮಂಜೇಶ್ವರ: ಶತಮಾನೋತ್ಸವ ಪೂರೈಸಿದ ಕುಂಜತ್ತೂರು ಎಲ್.ಪಿ. ಶಾಲೆ ಅವ್ಯವಸ್ಥಿತಗಳ ಆಗರವಾಗಿದೆ ಯೆಂದು ಸ್ಥಳೀಯರು ದೂರಿದ್ದಾರೆ. ಕಳೆದ ಮೂರು ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಮೈಲುಗಲ್ಲು ಸ್ಥಾಪಿಸಿದ ಈ ಸಂಸ್ಥೆ ಈಗ ಶಿಥಿಲಾವಸ್ಥೆಗೆ ತಲುಪಿದೆ. ಸಾವಿರಾರು ವಿದ್ಯಾರ್ಥಿಗಳು ಕಲಿತು ಉನ್ನತ ಸ್ಥಾನಕ್ಕೆ ತಲುಪಿದ ಈ ಸಂಸ್ಥೆ ಈಗ ಆಧುನಿಕ ಸೌಲಭ್ಯಗಳ ಕೊರತೆಯಿಂದ, ನಿರ್ವಹಣೆ ಸಮಸ್ಯೆಯಿಂದ ಕಂಗೆಟ್ಟಿದೆ. ಶಾಲೆಯ ಕಟ್ಟಡ ಸೋರುತ್ತಿದ್ದು, ಈಗ ಕಲಿಯುವ ಮಕ್ಕಳು ಈಜು ಕೊಳದಲ್ಲಿ ಕುಳಿತುಕೊಂಡಂತಹ ಸ್ಥಿತಿ ಉಂಟಾಗಿ ದೆಯೆಂದು ವಾರ್ಡ್ ಪ್ರತಿನಿಧಿ ತಿಳಿಸಿದ್ದಾರೆ. ಈಗ ಶಾಲೆಯಲ್ಲಿ ೧೦೫ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆಂದು ಮುಖ್ಯೋಪಾಧ್ಯಾಯ ರಾಧಾಕೃಷ್ಣ ತಿಳಿಸಿದ್ದಾರೆ. ವಿಕಲಚೇತನ ಮಕ್ಕಳಿಗೆ ಶಾಲೆಗೆ ಬರಲು ಅಥವಾ ಇತರ ಅಗತ್ಯಗಳಿಗೆ ಶಾಲೆಗೆ ವಾಹನ ತಲುಪುವಂತಹ ದಾರಿಯನ್ನು ಮುಚ್ಚಲಾಗಿದೆಯೆಂದು ವಾರ್ಡ್ ಸದಸ್ಯ ದೂರಿದ್ದಾರೆ.
ಆಟದ ಮೈದಾನವಿಲ್ಲದೆ ಮಕ್ಕಳ ಪ್ರತಿಭೆ ಪ್ರೋತ್ಸಾಹಿಸಲು ಸಾಧ್ಯವಾಗುತ್ತಿಲ್ಲ ವೆಂದು ಅಧ್ಯಾಪಕರು ಹಾಗೂ ಹೆತ್ತವರು ತಿಳಿಸುತ್ತಿದ್ದಾರೆ. ಶಾಲೆಯ ಆವರಣ ಗೋಡೆ ಕುಸಿದು ಬಿದ್ದಿದೆ. ವಿಷಪೂರಿತ ಹಾವುಗಳು ಕೂಡ ಸಮೀಪದಲ್ಲೇ ಕಂಡುಬರುತ್ತಿರುವುದು ವಿದ್ಯಾರ್ಥಿಗಳಿಗೆ ಭೀತಿ ಸೃಷ್ಟಿಸಿದೆ. ಶಾಲೆಯ ದುಸ್ಥಿತಿಯಿಂದಾಗಿ ಮಕ್ಕಳು ಸಂಕಷ್ಟ ಎದುರಿಸುತ್ತಿದ್ದು, ಸರಕಾರ ಹಾಗೂ ಶಿಕ್ಷಣ ಇಲಾಖೆ ಈ ಬಗ್ಗೆ ತಕ್ಷಣ ಗಮನ ಹರಿಸುವುದು ಅನಿವಾರ್ಯವೆಂದು ಸ್ಥಳೀಯರು ನುಡಿಯುತ್ತಾರೆ. ಶಾಲೆಯ ಅವ್ಯವಸ್ಥೆಗಳನ್ನು ಶೀಘ್ರ ಸರಿಪಡಿಸಿ ಈ ಶೈಕ್ಷಣಿಕ ಸಂಸ್ಥೆಯ ಸ್ತುತ್ಯರ್ಹ ಸಾಧನೆಗಳನ್ನು ಸಮಾಜಕ್ಕೆ ಪರಿಚಯಿ ಸಬೇಕೆಂದು ಸ್ಥಳೀಯ ವಿದ್ಯಾಭಿ ಮಾನಿಗಳು ಆಶಯ ಹೊಂದಿದ್ದಾರೆ.