‘ಕಾರ್ಗಿಲ್ ದಿವಸ್’ನಂದು ರೈಲು ಹಳಿಯಲ್ಲಿ ಕಗ್ಗಲ್ಲು ಇರಿಸಿ ಬುಡಮೇಲು ಕೃತ್ಯಕ್ಕೆ ಯತ್ನಿಸಿದ ಘಟನೆ: ಎನ್‌ಐಎ ತನಿಖೆ ಸಾಧ್ಯತೆ

ಕಾಸರಗೋಡು: ತೃಕರಿಪುರ-ಪಯ್ಯನ್ನೂರು ರೈಲು ನಿಲ್ದಾಣಗಳ ನಡುವಿನ ರಾಮವಿಲ್ಲಂ ಒಳವರ ರೈಲ್ವೇ ಗೇಟಿನ ಒಂದೂವರೆ ಕಿಲೋ ಮೀಟರ್‌ಗೊಳಪಟ್ಟ ಆರೆಡೆಗಳಲ್ಲಿ ರೈಲು ಹಳಿಯಲ್ಲಿ ಕಗ್ಗಲ್ಲು ಇರಿಸಿ ಬುಡಮೇಲು ಕೃತ್ಯಕ್ಕೆ ಯತ್ನಿಸಿದ ಘಟನೆ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ನಡೆಸುವ ಸಾಧ್ಯತೆ ಇದೆ. ಕಳೆದ ಶುಕ್ರವಾರ ರಾತ್ರಿ 11 ಗಂಟೆ ವೇಳೆಗೆ ರೈಲು ಹಳಿಯಲ್ಲಿ ಕಗ್ಗಲ್ಲು ಇರಿಸಿ ಆ ಮೂಲಕ ರೈಲುಗಳು ಹಳಿ ತಪ್ಪುವಂತೆ ಮಾಡಿ  ಭಾರೀ   ದುಷ್ಕೃತ್ಯಕ್ಕೆ ಯತ್ನ ನಡೆಸಲಾಗಿತ್ತು.

ಈ ಘಟನೆ ಬಗ್ಗೆ ಸದ್ಯ ರೈಲ್ವೇ ಭದ್ರತಾ ಪಡೆ (ಆರ್‌ಪಿಎಫ್) ತನಿಖೆ ನಡೆಸುತ್ತಿದೆ. ಮಾತ್ರವಲ್ಲ ರೈಲ್ವೇ ಪೊಲೀಸರು ಮತ್ತು ಚಂದೇರಾ ಪೊಲೀಸರು ಇನ್ನೊಂದೆಡೆ ಸಮಾನಾಂತರ ತನಿಖೆ ನಡೆಸುತ್ತಿದ್ದಾರೆ.  ವಿಶೇಷವೇನೆಂದರೆ ಕಾರ್ಗಿಲ್ ಯುದ್ಧದ ಗೆಲುವಿನ ೨೫ನೇ ವಾರ್ಷಿಕವನ್ನು ದೇಶಾದ್ಯಂತ ಭಾರೀ ಅದ್ದೂರಿಯಾಗಿ  ಕಾರ್ಗಿಲ್ ವಿಜಯ್ ದಿವಸ್ ಆಚರಿಸುತ್ತಿದ್ದ ದಿನದಂದೇ ಇಲ್ಲಿ ರೈಲು ಬುಡಮೇಲು ಕೃತ್ಯಕ್ಕೆ ಯತ್ನಿಸಲಾಗಿತ್ತೆಂಬುವುದು ಅತ್ಯಂತ ಗಂಭೀರವಾದ ವಿಷಯವಾಗಿದೆ. ಕಗ್ಗಲ್ಲು ಇರಿಸಿದವರ ಪತ್ತೆಗಾಗಿ ಆ ಪ್ರದೇಶದ ಸುತ್ತಮುತ್ತಲ ಸಿಸಿ ಟಿವಿ ದೃಶಗಳನ್ನು ಆರ್‌ಪಿಎಫ್ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ವೆಸ್ಟ್ ಕೋಸ್ಟ್  ಎಕ್ಸ್‌ಪ್ರೆಸ್ ರೈಲು ಹಾದು ಹೋಗುವ ಕೆಲವೇ ನಿಮಿಷಗಳ ಮೊದಲು ರೈಲು ಹಳಿಗಳ ಮೇಲೆ ಕಗ್ಗಲ್ಲು ಇರಿಸಲಾಗಿತ್ತು. ಆದರೆ ರೈಲು ಹಾದಿ ಹೋಗುವ ಮೊದಲು ಗೂಡ್ಸ್ ರೈಲು ಆ ದಾರಿ ಮೂಲಕ ಸಾಗಿತ್ತು. ಮಾತ್ರವಲ್ಲ ಆ ವೇಳೆ ಹಳಿಯಲ್ಲಿ ಕಗ್ಗಲ್ಲು ಇರಿಸಿರುವುದನ್ನು ರೈಲು ಹಳಿ ತಪಾಸಣೆಯಲ್ಲಿ ನಿರತರಾಗಿದ್ದ ರೈಲ್ವೇ ಸಿಬ್ಬಂದಿಗಳು ಕಂಡು ಅದನ್ನು ತಕ್ಷಣ ತೆರವುಗೊಳಿಸಿದರಿಂದಾಗಿ ಅದೃಷ್ಟವಶಾತ್  ಸಂಭಾವ್ಯ ಭಾರೀ ದೊಡ್ಡ ಅನಾಹುತ ತಪ್ಪಿಹೋಗಿತ್ತು. ಕಾರ್ಗಿಲ್ ವಿಜಯ್ ದಿವಸ್ ದಿನದಂದೇ ಇಂತಹ ಬುಡಮೇಲು ಕೃತ್ಯ ಯತ್ನ ನಡೆದಿರುವುದು ಭಾರೀ ಸಂದೇಹ ಗಳಿಗೂ ದಾರಿಮಾಡಿಕೊಟ್ಟಿದೆ. ಅದರಿಂದ ಈ ಘಟನೆ ಬಗ್ಗೆ ಎನ್‌ಐಎ ತನಿಖೆ ನಡೆಸುವ ಸಾಧ್ಯತೆ ಇದೆ.

ಇದೇ ಸಂದರ್ಭದಲ್ಲಿ ಘಟನೆ ಬಗ್ಗೆ ಎನ್‌ಐಎ ತನಿಖೆ ನಡೆಸುವಂತೆ ಆಗ್ರಹಿಸಿ ಬಿಜೆಪಿಯ ಕಾಸರಗೋಡು ಜಿಲ್ಲಾ ಸಮಿತಿ ಮತ್ತು ತೃಕರಿಪುರ ಮಂಡಲ ಸಮಿತಿ ಕೇಂದ್ರ ಗೃಹಖಾತೆ ಮತ್ತು ರೈಲು ಸಚಿವಾಲಯಕ್ಕೂ ಮನವಿ ಸಲ್ಲಿಸಿದೆ.  ಎರಡು ವರ್ಷಗಳ ಹಿಂದೆಯೂ ತೃಕರಿಪುರ ರೈಲು ನಿಲ್ದಾಣದ ಬಳಿ ರೈಲು ಹಳಿಯಲ್ಲಿ ಕಗ್ಗಲ್ಲು ಇರಿಸಿ ಬುಡಮೇಲು ಕೃತ್ಯವೆಸಗಲಾಗಿತ್ತು. ಅದಕ್ಕೆ ಸಂಬಂಧಿಸಿ ಅಂದು ಆರು ಮಂದಿ ಮಕ್ಕಳನ್ನು ಸೆರೆಹಿಡಿಯಲಾಗಿತ್ತು. ಮುನ್ನೆಚ್ಚರಿಕೆ ನೀಡಿ ಬಳಿಕ ಅವರನ್ನು ಪೊಲೀಸರು ಬಿಡುಗಡೆಗೊಳಿಸಿ ದ್ದರು. ಅದನ್ನು ಚೆನ್ನಾಗಿ ತಿಳಿದ ದುಷ್ಕರ್ಮಿಗಳು ತಮ್ಮ ದುಷ್ಕೃತ್ಯಗಳಿಗೆ ಮಕ್ಕಳನ್ನು ಬಳಸತೊಡಗಿದ್ದಾರೆಂಬ ಶಂಕೆಯನ್ನು ತನಿಖಾ ತಂಡ ವ್ಯಕ್ತಪಡಿಸಿದೆ.

Leave a Reply

Your email address will not be published. Required fields are marked *

You cannot copy content of this page