ದೇರಂಬಳ ತಾತ್ಕಾಲಿಕ ಕಂಗಿನ ಸಂಕ ನೀರುಪಾಲು: ಸಂಚಾರ ಮೊಟಕಾಗಿ ಸ್ಥಳೀಯರಿಗೆ ಸಮಸ್ಯೆ
ಉಪ್ಪಳ: ದೇರಂಬಳ ಹೊಳೆಗೆ ತಾತ್ಕಾಲಿಕವಾಗಿ ನಿರ್ಮಿಸಿದ್ದ ಕಾಲುಸಂಕ ಕೂಡಾ ನೀರಿಗೆ ಕೊಚ್ಚಿಹೋಗಿದೆ. ಇದರಿಂದಾಗಿ ಈ ಪ್ರದೇಶದ ಹಲವಾರು ಮಂದಿ ಪ್ರಯಾಣ ಸಮಸ್ಯೆ ಎದುರಿಸುತ್ತಿದ್ದಾರೆ. ಇಲ್ಲಿದ್ದ ಸಂಕ ಕುಸಿದು ಹಲವಾರು ತಿಂಗಳು ಕಳೆದರೂ ನಿರ್ಮಾಣಕ್ಕೆ ಕ್ರಮ ಉಂಟಾಗದ ಹಿನ್ನೆಲೆಯಲ್ಲಿ ಸ್ಥಳೀಯರು ಕಂಗಿನಿಂದ ತಾತ್ಕಾಲಿಕ ಸಂಕ ನಿರ್ಮಿಸಿ ಸಂಚರಿಸುತ್ತಿದ್ದರು. ಆದರೆ ಇತ್ತೀಚೆಗೆ ಸುರಿದ ಮಳೆಗೆ ಈ ಸಂಕವೂ ನೀರಿಗೆ ಕೊಚ್ಚಿಹೋಗಿದ್ದು, ಶಾಲಾ ಕಾಲೇಜು, ಕೂಲಿ ಕೆಲಸಕ್ಕೆ ತೆರಳಬೇಕಾದ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಮಂಗಲ್ಪಾಡಿ, ಮೀಂಜ ಪಂಚಾಯತ್ ಮಧ್ಯೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದ್ದು, ಈಗ ಸಂಚಾರ ದುಸ್ತರಗೊಂಡಿದೆ. ದೇರಂಬಳ, ಚಿಗುರುಪಾದೆ ನಿವಾಸಿಗಳಿಗೆ ಬೇಕೂರು, ಪೈವಳಿಕೆ, ಜೋಡುಕಲ್ಲು ಹಾಗೂ ಜೋಡುಕಲ್ಲು, ಮಡಂದೂರು ಪ್ರದೇಶದ ಜನರಿಗೆ ಮೀಯಪದವು, ಚಿಗುರುಪಾದೆ ಮೊದಲಾದ ಕಡೆಗಳಿಗೆ ಈ ದಾರಿಯಲ್ಲಿ ಸಂಚರಿಸಬೇಕಾಗಿದೆ. ಆದರೆ ಈಗ ಹತ್ತು ಕಿಲೋಮೀಟ ರ್‌ಗೂ ಅಧಿಕ ಸುತ್ತುಬಳಸಿ ಸಂಚರಿ ಸಬೇಕಾದ ಸ್ಥಿತಿ ಉಂಟಾಗಿದೆಯೆಂದು ಸ್ಥಳೀಯರು ತಿಳಿಸಿದ್ದಾರೆ.
ಇಲ್ಲಿದ್ದ ಸಂಕ ಕುಸಿದು ಹಲವಾರು ತಿಂಗಳು ಕಳೆದರೂ ಸಂಬಂಧಪಟ್ಟವರು ಗಮನಹರಿಸಿಲ್ಲವೆಂದು ಸ್ಥಳೀಯರು ದೂರಿದ್ದಾರೆ. ನಿರಂತರ ಮನವಿ ನೀಡಿದರೂ ಯಾವುದೇ ಕ್ರಮ ಇದುವರೆಗೂ ಉಂಟಾಗಿಲ್ಲವೆಂದು ದೂರಿದ ಸ್ಥಳೀಯರು ವ್ಯವಸ್ಥಿತ ಸೇತುವೆ ನಿರ್ಮಿಸುವವರೆಗೆ ಜನರ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.