ವಿಷ ಸೇವಿಸಿ ಚಿಕಿತ್ಸೆಯಲ್ಲಿದ್ದ ಯುವಕ ಆಸ್ಪತ್ರೆಯಲ್ಲಿ ಮೃತ್ಯು
ಕುಂಬಳೆ: ವಿಷ ಸೇವಿಸಿ ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟನು. ಸೂರಂಬೈಲು ನಿವಾಸಿ ಸುಂದರ ಎಂಬವರ ಪುತ್ರ ವಿಜಯ್ (23) ಮೃತಪಟ್ಟ ಯುವಕ. ಇವರು ಪೈಂಟಿಂಗ್ ಕಾರ್ಮಿಕನಾಗಿದ್ದರು. ಈ ತಿಂಗಳ 13ರಂದು ಇವರು ಇಲಿ ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಕಾಸರಗೋಡಿನ ಆಸ್ಪತ್ರೆಗೂ ಬಳಿಕ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಬಳಿಕ ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಅಪರಾಹ್ನ ವಿಜಯ್ ಮೃತಪಟ್ಟರು.
ಇದೇ ವೇಳೆ ಮೂರು ತಿಂಗಳ ಹಿಂದೆ ಮೂವರ ತಂಡವೊಂದು ವಿಜಯ್ಗೆ ಹಲ್ಲೆಗೈದು ಕೈಗೆ ಗಂಭೀರ ಗಾಯಗೊಳಿಸಿತ್ತೆನ್ನಲಾಗಿದೆ. ಅನಂತರ ವಿಜಯ್ ಮನೆಯಲ್ಲೇ ಇದ್ದರು. ಅಲ್ಲದೆ ಇತ್ತೀಚೆಗೆ ಓರ್ವೆ ಯುವತಿ ವಿಜಯ್ ವಿರುದ್ಧ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಳೆನ್ನಲಾಗಿದೆ. ಇದರ ಮನೋವ್ಯಥೆಯಿಂದ ವಿಜಯ್ ವಿಷ ಸೇವಿಸಿರಬಹುದೆಂದು ತಂದೆ ಸುಂದರ ತಿಳಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಇಂದು ಊರಿಗೆ ತರಲಾಗುವುದೆಂದು ತಿಳಿಸಲಾಗಿದೆ. ಮೃತರು ತಂದೆ, ತಾಯಿ ಸೆಲ್ವಿ, ಸಹೋದರಿಯರಾದ ಮೋತಿಲ ಅಮ್ಮು, ಅನು, ಸುನಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.