ವಾಟ್ಸಪ್ ಗ್ರೂಪ್ ಮೂಲಕ ಒಂದಂಕಿ ಲಾಟರಿ ಮಾರಾಟ: ಓರ್ವ ಬಂಧನ

ಕಾಸರಗೋಡು: ಬಹಿರಂಗವಾಗಿ  ಒಂದಂಕಿ ಲಾಟರಿ ವ್ಯಾಪಾರ ನಡೆಸಿದ ಯುವಕನನ್ನು ಸೆರೆ ಹಿಡಿಯಲಾಗಿದೆ. ಮಾಲೋಂಚುಳ್ಳಿಯ ಚಾಲಿನ್‌ಕರ ನಿವಾಸಿ ಬಿ. ಸಜೀವನ್ (39) ಎಂಬಾತನನ್ನು ರಾಜಪುರಂ ಎಸ್‌ಐ ಸಿ. ಪ್ರದೀಪ್ ಕುಮಾರ್ ಬಂಧಿಸಿದ್ದಾರೆ. ನಿನ್ನೆ ಬೆಳಿಗ್ಗೆ ಚೆರಿಯಕಳ್ಳಾರ್ ಎಂಬಲ್ಲಿಂದ ಈತನನ್ನು ಸೆರೆ ಹಿಡಿಯಲಾಗಿದೆ. ರಸ್ತೆ ಬದಿ ಬುಲ್ಲೆಟ್ ಬೈಕ್‌ನಲ್ಲಿ ಕುಳಿತು ಈತ ಒಂದಂಕಿ ಲಾಟರಿ ಮಾರಾಟ ಮಾಡುತ್ತಿದ್ದನೆನ್ನಲಾಗಿದೆ. ಪೊಲೀಸರು  ಸ್ಥಳಕ್ಕೆ ತಲುಪಿದಾಗ ಪರಾರಿಯಾಗಲೆತ್ನಿಸಿದ ಈತನನ್ನು ಬೆನ್ನಟ್ಟಿ ಸೆರೆ ಹಿಡಿಯಲಾಗಿದೆ.  ಬಳಿಕ ಪೊಲೀಸರು ತಪಾಸಣೆ ನಡೆಸಿದಾಗ ನಂಬ್ರಗಳನ್ನು ಬರೆದಿಟ್ಟ ಕಾಗದದ ತುಂಡುಗಳು ಹಾಗೂ 1040  ರೂ.ಗಳನ್ನು ಈತನ ಕೈಯಿಂದ ವಶಪಡಿಸಲಾಗಿದೆ. ‘ಉಡನ್ ಪಣಂ’ ಎಂಬ ಹೆಸರಿನಲ್ಲಿ ಈತ ವಾಟ್ಸಪ್ ಗ್ರೂಪ್ ತಯಾರಿಸಿ ಒಂದಂಕಿ ಲಾಟರಿ ಮಾರಾಟ ನಡೆಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಜನರು ಗೂಗಲ್ ಪೇ ಮೂಲಕ ಹಣ ಕಳುಹಿಸಿರುವುದನ್ನೂ ಪತ್ತೆಹಚ್ಚಲಾಗಿದೆ. 34 ಮಂದಿ ಈತನ ವಾಟ್ಸಪ್ ಗ್ರೂಪ್‌ನಲ್ಲಿದ್ದಾರೆ. ಕಳೆದ ಜುಲೈ 15ರಿಂದ ಈ ಗ್ರೂಪ್ ಕಾರ್ಯಾಚರಿಸತೊಡಗಿದೆ. ಕೇರಳ ಲಾಟರಿಯ ಡ್ರಾದಲ್ಲಿ ಪ್ರಥಮ ಬಹುಮಾನ ಲಭಿಸುವ ಟಿಕೆಟ್‌ನ ಕೊನೆಯ ಮೂರು ಸಂಖ್ಯೆಗಳಿಗೆ 5000 ರೂ., ಬಳಿಕ ಇತರ ಬಹುಮಾನಗಳಾಗಿ 1000, 500 ಎಂಬೀ ರೀತಿಯಲ್ಲಿ ಈತ  ನೀಡುತ್ತಿದ್ದನೆನ್ನಲಾಗಿದೆ.  ಹಲವಾರು ಮಂದಿ ವ್ಯತ್ಯಸ್ಥ ನಂಬ್ರಗಳಿ ಗಾಗಿ 1000 ರೂಪಾಯಿಗಳನ್ನು ಗೂಗಲ್ ಪೇ ಮೂಲಕ ಈತನಿಗೆ ಕಳುಹಿಸಿಕೊಟ್ಟಿರುವುದಾಗಿಯೂ ತಿಳಿದು ಬಂದಿದೆ. ಬಂಧಿತ ಆರೋಪಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ.

You cannot copy contents of this page