ಅಡುಗೆ ಅನಿಲ ವಿತರಣೆಯಲ್ಲಿ ವ್ಯತ್ಯಯ : ಯೂತ್‌ಲೀಗ್‌ನಿಂದ ಏಜೆನ್ಸಿ ಮುಂಭಾಗ ಪ್ರತಿಭಟನೆ

ಮಂಜೇಶ್ವರ : ಮಂಜೇಶ್ವರದಲ್ಲಿ ಕಳೆದ ಕೆಲವು ಸಮಯಗಳಿಂದ ಗ್ರಾಹಕರಿಗೆ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು ಸಾಮಾನ್ಯ ಜನತೆ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಏಜನ್ಸಿಯ ದ್ವಂದ್ವ ನಿಲುವಿನ ವಿರುದ್ಧ ಕಳೆದ ಕೆಲವು ದಿನಗಳಿಂದ ಏಜೆನ್ಸಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಗ್ರಾಹಕರನ್ನು ಗ್ಯಾಸ್ ಏಜೆನ್ಸಿ ಕಚೇರಿಗೆ ಕರೆಸಿ ಬೆಳಿಗ್ಗಿನಿಂದ ಸಂಜೆ ತನಕ ಬಿಸಿಲು ಮಳೆ ಎನ್ನದೆ ಕಾದು ನಿಂತು ಕೊನೆಗೆ ಬರಿಗೈಯಿಂದ ಹಿಂತಿರುಗುವ ಪರಿಸ್ಥಿತಿ ಎದುರಾಗಿತ್ತು. ಅಡುಗೆ ಅನಿಲ ದಾಸ್ತಾನು ಇದ್ದರೂ ಗ್ರಾಹಕರಿಗೆ ನೀಡದೆ ಇರುವುದರ ಬಗ್ಗೆ ಕೂಡಾ ವ್ಯಾಪಕ ದೂರುಗಳು ಕೇಳಿ ಬರುತಿತ್ತು.
ಈ ಬಗ್ಗೆ ಮಾಹಿತಿ ಲಭಿಸಿದ ಮಂಜೇಶ್ವರ ಪಂಚಾಯತ್ ಯೂತ್ ಲೀಗ್ ನೇತಾರರು ಮಂಜೇಶ್ವರ ಅನಂತ ಗ್ಯಾಸ್ ಏಜೆನ್ಸಿ ಕಚೇರಿಗೆ ತೆರಳಿ ವಿಚಾರಿಸಿದಾಗ ಸಮರ್ಪಕ ಉತ್ತರ ಲಭಿಸದ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ ಯೂತ್‌ಲೀಗ್ ಕಾರ್ಯಕರ್ತರು ಏಜನ್ಸಿಗೆ ಮುತ್ತಿಗೆ ಹಾಕಿದ್ದಾರೆ. ಬಳಿಕ ಮಂಜೇಶ್ವರ ಪೊಲೀಸರು ಹಾಗೂ ಅಧಿಕಾರಿಗಳು ಆಗಮಿಸಿ ಯೂತ್ ಲೀಗ್ ನೇತಾರರೊಂದಿಗೆ ನಡೆಸಿದ ಮಾತುಕತೆಯಲ್ಲಿ ಮುಂದಿನ ದಿನಗಳಲ್ಲಿ ಈ ರೀತಿಯ ಸಮಸ್ಯೆ ಸೃಷ್ಟಿಯಾಗಲಾರದು. ಸಾಧ್ಯವಾದಷ್ಟು ಮಟ್ಟಿಗೆ ಗ್ರಾಹಕರಿಗೆ ಸಮಸ್ಯೆಯಾಗದ ರೀತಿಯಲ್ಲಿ ವಿತರಿಸುವುದಾಗಿ ಗ್ಯಾಸ್ ಏಜೆನ್ಸಿ ಅಧಿಕಾರಿಗಳು ನೀಡಿದ ಭರವಸೆಯ ಹಿನ್ನೆಲೆಯಲ್ಲಿ ಯೂತ್ ಲೀಗ್ ನೇತಾರರು ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ. ನೇತಾರರಾದ ಮುಕ್ತಾರ್ ಎ, ಸಿದ್ದೀಖ್ ದಂಡುಗೋಳಿ, ಬಿ.ಎಂ ಮುಸ್ತಫ, ಫಾರೂಕ್ ಚೆಕ್ ಪೋಸ್ಟ್, ಹನೀಫ್ ಕುಚ್ಚಿಕ್ಕಾಡ್, ಇರ್ಷಾದ್ ಚೆಕ್ ಪೋಸ್ಸ್, ಮುಬಾರಕ್ ಹಾಗೂ ರಿಯಾಝ್ ಮೊದಲಾದವರು ನೇತೃತ್ವ ನೀಡಿದರು.

Leave a Reply

Your email address will not be published. Required fields are marked *

You cannot copy content of this page