ಮೀನಿಗೆ ಗಾಳ ಹಾಕುತ್ತಿದ್ದಾಗ ನಾಪತ್ತೆಯಾದ ಯುವಕನ ಮೃತದೇಹ ತೃಶೂರು ಸಮುದ್ರದಲ್ಲಿ ಪತ್ತೆ
ಕಾಸರಗೋಡು: ಕೀಯೂರು ಮೀನುಗಾರಿಕಾ ಬಂದರು ಸಮೀಪ ಮೀನಿಗೆ ಗಾಳ ಹಾಕುತ್ತಿದ್ದ ವೇಳೆ ನಾಪತ್ತೆಯಾದ ಯುವಕನ ಮೃತದೇಹ ಪತ್ತೆಯಾಗಿದೆ. ಚೆಮ್ನಾಡ್ ಕಲ್ಲುವಳಪ್‌ನ ಮುಹಮ್ಮದ್ ರಿಯಾಸ್ (36) ಎಂಬವರ ಮೃತದೇಹ ತೃಶೂರು ಚಾವಕ್ಕಾಡ್ ಕಡಲ ಕಿನಾರೆಯಲ್ಲಿ ಕಂಡು ಬಂದಿದೆ. ನಿನ್ನೆ ಬೆಳಿಗ್ಗೆ ತೃಶೂರು ಅಳಿಕ್ಕೋಡ್ ಕರಾವಳಿ ಪೊಲೀಸ್ ಠಾಣೆಯ ಪಶ್ಚಿಮ ಭಾಗದಲ್ಲಿ ಸಮುದ್ರ ತೀರದಿಂದ ೧೨ ಕಿಲೋ ಮೀಟರ್ ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಈ ಭಾಗದಲ್ಲಿ ಮೀನು ಹಿಡಿಯಲು ತೆರಳಿದ ಮಹಾದೇವನ್ ಎಂಬ ದೋಣಿಯ ನೌಕರರಿಗೆ ಸಮುದ್ರದಲ್ಲಿ ಮೃತದೇಹ ಕಂಡು ಬಂದಿದೆ. ಅವರು ನೀಡಿದ ಮಾಹಿತಿಯಂತೆ ತಲುಪಿದ ಪೊಲೀಸರು ಮಧ್ಯಾಹ್ನ ವೇಳೆ ಮೃತದೇಹವನ್ನು ದಡಕ್ಕೆ ತಲುಪಿಸಿದರು. ಬಳಿಕ ಕೊಡುಂಗಲ್ಲೂರು ತಾಲೂಕು ಆಸ್ಪತ್ರೆಯಲ್ಲಿ ಮೃತದೇಹದ ಮಹಜರು ನಡೆಸಿ ತೃಶೂರು ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ರಿಯಾಸ್ ಧರಿಸಿದ್ದ ಟ್ರಾಕ್ ಸ್ಯೂಟ್‌ನ ಜೇಬಿನಲ್ಲಿ ಮೊಬೈಲ್ ಫೋನ್ ಆಫ್ ಆದ ಸ್ಥಿತಿಯಲ್ಲಿತ್ತು.
ಅದರಿಂದ ಸಿಮ್‌ಕಾರ್ಡ್ ತೆಗೆದು ಬೇರೆ ಮೊಬೈಲ್ ಫೋನ್‌ಗೆ ಅಳವಡಿಸಿ ನೋಡಿದಾಗ ಅದು ರಿಯಾಸ್‌ನದ್ದೆಂದು ದೃಢೀಕರಿಸಲಾಯಿತು. ದಿ| ಮೊಯ್ದೀನ್ ಕುಂಞಿಯವರ ಪುತ್ರನಾದ ಮೃತರು ತಾಯಿ ಮುಂತಾಸ್, ಪತ್ನಿ ಸಿಯಾನ, ಮಕ್ಕಳಾದ ಫಾತಿಮ ರೌಸ, ಮರಿಯಂ ರಾನಿಯ, ಆಯಿಶ ರೈಸಲ್ ಅರ್ವ, ಸಹೋದರರಾದ ಹಬೀಬ್, ಅನ್ವಾಸ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.