ವೃದ್ಧೆಯ ಕೊಲೆಗೈದು ಹೂತು ಹಾಕಿದ ಆರೋಪಿಗಳು ಮಣಿಪಾಲದಿಂದ ಸೆರೆ

ಕಾಸರಗೋಡು: ಕೊಚ್ಚಿ ನಿವಾಸಿಯಾದ  ಸುಭದ್ರ (73) ಎಂಬ ಮಹಿಳೆಯನ್ನು ಕೊಲೆಗೈದು ಮೃತದೇಹವನ್ನು  ಹಿತ್ತಿಲಿನಲ್ಲಿ ಹೂತು ಹಾಕಿದ ಪ್ರಕರಣದಲ್ಲಿ ಆರೋಪಿಗಳಾದ ದಂಪತಿಯನ್ನು ಕರ್ನಾಟಕದ ಮಣಿಪಾಲದಿಂದ ಪೊಲೀಸರು ಸೆರೆಹಿಡಿದಿದ್ದಾರೆ.

ಕಾಟೂರು ಪಳ್ಳಿಪರಂಬಿಲ್‌ನ ಮ್ಯಾಥ್ಯೂಸ್ ಯಾನೆ ನಿತಿನ್ (35), ಪತ್ನಿ ಕರ್ನಾಟಕದ ಉಡುಪಿ ನಿವಾಸಿ ಶರ್ಮಿಳ (36) ಎಂಬಿವರು ಬಂಧಿತ ಆರೋಪಿಗಳಾಗಿದ್ದು ಅವರನ್ನು ಮಣ್ಣಾಂಚೇರಿ ಪೊಲೀಸ್ ಠಾಣೆಗೆ ತಲುಪಿಸಲಾಗಿದೆ.

ಸುಭದ್ರರನ್ನು ಕೊಲೆಗೈದು ಮೃತದೇಹವನ್ನು  ಆಲಪ್ಪುಳ ಬಳಿಯ ಕಲವೂರ್ ಕೋರ್ತುಶ್ಶೇರಿ ಎಂಬಲ್ಲಿನ ಹಿತ್ತಿಲಿನಲ್ಲಿ ಹೂತು ಹಾಕಿದ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದರು. ಆರೋಪಿಗಳು ಉಡುಪಿಗೆ ತಲುಪಿದ್ದಾ ರೆಂಬ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಇದರಿಂದ ಅವರ ಮೊಬೈಲ್ ಲೊಕೇಶನ್ ಕೇಂದ್ರೀಕರಿಸಿ ಪೊಲೀಸರು ಅವರನ್ನು  ಹಿಂಬಾಲಿಸಿದ್ದಾರೆ. ನಿನ್ನೆ ಬೆಳಿಗ್ಗೆ  ಮಂಗಳೂರಿನಲ್ಲಿ ಶರ್ಮಿಳಳ ಫೋನ್ ಆನ್ ಆಗಿತ್ತು. ಕೂಡಲೇ ಪೊಲೀಸರು ಉಡುಪಿ, ಮಂಗಳೂರು ಮೊದಲಾದೆ ಡೆಗಳಲ್ಲಿ ಕೆಲವರನ್ನು ಸಂಪರ್ಕಿಸಿ ಆರೋಪಿಗಳ ಮೇಲೆ ನಿಗಾ ಇರಿಸು ವಂತೆ ತಿಳಿಸಿದ್ದರು. ಮಧ್ಯಾಹ್ನ ವೇಳೆ ಶರ್ಮಿಳಳ ಮೊಬೈಲ್ ಮಣಿಪಾಲದಲ್ಲಿ ಮತ್ತೆ ಕಾರ್ಯಾಚರಿಸಿದೆ. ಆಕೆ ಈ ಹಿಂದೆ ವಾಸಿಸಿದ್ದ ಪೆರಂಪಳ್ಳಿ ಎಂಬಲ್ಲಿನ ಮಹಿಳೆಯೊಬ್ಬರ ಮನೆಗೆ ತಲು ಪಿರುವುದನ್ನು ಪೊಲೀಸರು ತಿಳಿದುಕೊಂಡರು. ಅಲ್ಲಿಗೆ ತಲುಪಿದ ಪೊಲೀಸರು ಆರೋಪಿಗಳನ್ನು ಕಸ್ಟಡಿಗೆ ತೆಗೆದಿದ್ದಾರೆ.  ಆರೋಪಿಗಳ ಶೋಧಕ್ಕೆ ಮಣಿಪಾಲ ಪೊಲೀಸರು ಕೇರಳ ಪೊಲೀಸರೊಂದಿಗೆ ಸಹಕರಿಸಿದ್ದು, ಇದರಿಂದ ಸ್ಥಳವನ್ನು   ಶೀಘ್ರ ಪತ್ತೆಹಚ್ಚಲು ಸಾಧ್ಯವಾಯಿತು.

ಕೊಚ್ಚಿ ಕರಿತ್ತಲ ರೋಡ್ ಶಿವಕೃಪಾ ನಿವಾಸಿ ಸುಭದ್ರ ಕಳೆದ ತಿಂಗಳ 4ರಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ  ಆರೋಪಿ ಶರ್ಮಿಳಳೊಂದಿಗೆ ಸುಭದ್ರ ತೆರಳಿರುವುದು ತಿಳಿದುಬಂದಿತ್ತು. ಇದರಿಂದ ಶರ್ಮಿಳಾಳ ಮನೆಗೆ ಪೊಲೀಸರು ತಲುಪಿದಾಗ ಆಕೆ ಹಾಗೂ ಪತಿ ನಾಪತ್ತೆಯಾಗಿದ್ದರು. ಇದರಿಂದ ಸಂಶಯಗೊಂಡ ಪೊಲೀಸರು, ಶ್ವಾನದಳ ತಲುಪಿ ಪರಿಶೀಲಿಸಿದಾಗ ಮೃತದೇಹ ಹೂತು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸುಭದ್ರರ  ಚಿನ್ನಾಭರಣ ದೋಚಲು ಆರೋಪಿಗಳು ಈ ಕೊಲೆ ಕೃತ್ಯ ನಡೆಸಿದ್ದಾರೆಂದು ತಿಳಿದುಬಂದಿದೆ. ಚಿನ್ನಾಭರಣಗಳನ್ನು ಆರೋಪಿಗಳು ಮಂಗಳೂರಿನಲ್ಲಿ ಅಡವಿರಿಸಿದ್ದರು. ಸಮಗ್ರತನಿಖೆಗೊಳಪಡಿಸಿದ ಬಳಿಕ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

You cannot copy content of this page