ಮಲೇಶ್ಯಾದಲ್ಲಿ ಉದ್ಯೋಗ ಭರವಸೆಯೊಡ್ಡಿ ಹಲವರಿಂದ ಲಕ್ಷಾಂತರ ರೂ. ಪಡೆದು ವಂಚನೆ: ಕುಂಬಳೆ ನಿವಾಸಿ ಟ್ರಾವೆಲ್ ಮಾಲಕನ ವಿರುದ್ಧ ದೂರು

ಕುಂಬಳೆ: ಮಲೇಶ್ಯಾದಲ್ಲಿ ಉದ್ಯೋಗ ಭರವಸೆಯೊಡ್ಡಿ ಕುಂಬಳೆಯ ಟ್ರಾವೆಲ್ ಏಜೆನ್ಸಿಯ ಮಾಲಕನ ನೇತೃತ್ವದಲ್ಲಿ ಹಲವರಿಂದ  ಲಕ್ಷಾಂತರ ರೂಪಾಯಿ ಪಡೆದು ವಂಚಿಸಿರುವುದಾಗಿ ಆರೋಪವುಂಟಾಗಿದೆ. ಉದ್ಯೋಗ ಲಭಿಸಬಹುದೆಂಬ ನಿರೀಕ್ಷೆಯಿಂದ ಹಣ ನೀಡಿ ವಂಚಿತರಾದುದಾಗಿ ಆರೋಪಿಸಿ ಕರ್ನಾಟಕ ನಿವಾಸಿಗ ಳಾದ  ೨೪ ಮಂದಿ ಯುವಕರು ಇದೀಗ ರಂಗಕ್ಕಿಳಿದಿದ್ದಾರೆ. ದ.ಕ ಜಿಲ್ಲೆಯ ಸುಳ್ಯ, ಬೆಳ್ತಂಗಡಿ, ಪುತ್ತೂರು ಎಂಬಿಡೆಗಳ 11 ಮಂದಿ ನಿನ್ನೆ ಕುಂಬಳೆ ಪ್ರೆಸ್ ಫಾರಂನಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಮಗುಂಟಾದ ವಂಚನೆ ಕುರಿತು ವಿವರಿಸಿದ್ದಾರೆ. ಕುಂಬಳೆಯ ಟ್ರಾವೆಲ್ ಏಜೆನ್ಸಿ ಮಾಲಕನಾದ ಸಾಮಾಜಿಕ ಕಾರ್ಯಕರ್ತ, ಆತನ ಮಗ ಹಾಗೂ ಕರ್ನಾಟಕದ ಬಿಸಿ ರೋಡ್ ನಿವಾಸಿ ನೌಕರ ಸೇರಿ ತಮ್ಮನ್ನು ವಂಚಿಸಿರುವುದಾಗಿ ಇವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಮಲೇಶ್ಯಾದಲ್ಲಿ ಉದ್ಯೋಗದ ಭರವಸೆಯೊಡ್ಡಿ ವಿಸಾಕ್ಕಾಗಿ ಪ್ರತಿಯೊಬ್ಬರಿಂದ ತಲಾ 1,35,000 ರೂಪಾಯಿ  ವಂಚಿಸಿರುವುದಾಗಿ ಯುವಕರು ಆರೋಪಿಸಿದ್ದಾರೆ. ಮಲೇಶ್ಯಾದ ಟೂರಿಸಂಗೆ ಸಂಬಂಧಪಟ್ಟ ಉದ್ಯೋಗದ ಭರವಸೆ ಏರ್ಪಡಿಸಿರುವುದಾಗಿ ಇವರಲ್ಲಿ ತಿಳಿಸಲಾಗಿತ್ತು. ಇದರಂತೆ ಆಗೋಸ್ತ್ 28ರಂದು ರಾತ್ರಿ 12.30ಕ್ಕೆ ತಿರುವನಂತಪುರದಿಂದ ಏರ್ ಏಷ್ಯಾ ವಿಮಾನದಲ್ಲಿ 12 ಮಂದಿ ಪ್ರಯಾಣ ಹೊರಟಿದ್ದರು.  ಆದರೆ ಅಲ್ಲಿಗೆ ತಲುಪಿದಾಗ ಟಿಶ್ಯೂ ಕಂಪೆನಿಯ ವೇರ್ ಹೌಸ್‌ಗಿರುವ ವಿಸಾ ಅದಾಗಿತ್ತೆಂದು ತಿಳಿದುಬಂದಿದೆ. ಟೂರಿಸ್ಟ್ ವಿಸಾವಾದುದರಿಂದ ಮರಳಿ ಬರಲು ಟಿಕೆಟ್ ಇಲ್ಲದುದರಿಂದ ವಿಮಾನ ನಿಲ್ದಾಣದಿಂದ ಹೊರಗಿಳಿಯಲು ಸಾಧ್ಯವಾಗಲಿಲ್ಲ. ಮೂರು ದಿನಗಳ ಕಾಲ ಆಹಾರವಿಲ್ಲದೆ ಅಲ್ಲಿ ತಂಗಿದ್ದು, ಕೊನೆಗೆ ವಿಮಾನ ನಿಲ್ದಾಣದ ಅಧಿಕಾರಿಗಳು ಮರಳಿ ಕಳುಹಿಸಿದರೆಂದು ಯುವಕರು ತಿಳಿಸಿದ್ದಾರೆ. ಇತರ ಹಲವರಿಗೂ ಉದ್ಯೋಗ ವಿಸಾ ಭರವಸೆಯೊಡ್ಡಿ ಒಂದುಲಕ್ಷ, ಐವತ್ತು ಸಾವಿರ ಎಂಬೀ ರೀತಿಯಲ್ಲಿ ಪಡೆದು ವಂಚನಾ ತಂಡ  ಲಪಟಾಯಿಸಿರುವುದಾಗಿ ಆರೋಪಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಪ್ರಜ್ವಲ್, ಅಶ್ವತ್ಥ್, ರಾಕೇಶ್, ಮನೋಜ್, ಶ್ರೀನಿವಾಸ್ ಎಂಬಿವರಿದ್ದರು.

Leave a Reply

Your email address will not be published. Required fields are marked *

You cannot copy content of this page