ಕುಂಬಳೆ: ಚಿಂತಾಜನಕ ಸ್ಥಿತಿಗೆ ತಲುಪಿದ್ದ ಗರ್ಭಿಣಿ ದನವನ್ನು ಪಶುಸಂಗೋಪನಾ ವಿಭಾಗದ ಅಧಿಕಾರಿಗಳು ಹರಸಾಹಸಪಟ್ಟು ಬದುಕಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಬ್ರಾಣ ನಿವಾಸಿ ಸುಮಲತಾ ರಾಮಚಂದ್ರ ಎಂಬವರ ಗರ್ಭಿಣಿ ದನವನ್ನು ಆರೋಗ್ಯ ಸ್ಥಿತಿ ಹದಗೆಟ್ಟ ಬಗ್ಗೆ ತಿಳಿದ ಪಂಚಾಯತ್ ಕುಟುಂಬಶ್ರೀ ಪಶುಸಂಗೋಪನಾ ವಿಭಾಗದ ಮಾಸ್ಟರ್ ಸಿ.ಆರ್.ಪಿಗಳಾದ ಬಿಂದು ಬೆಂಜಮಿನ್, ವಿನೀಶ ಶಾಜಿ, ಸಿಡಿಎಸ್ ಅಧ್ಯಕ್ಷೆ ಖದೀಜ ಪಿ.ಕೆ, ಅಧಿಕಾರಿಗಳ ಜೊತೆ ಸೇರಿ ದನವನ್ನು ರಕ್ಷಿಸುವಲ್ಲಿ ಸಫಲರಾಗಿದ್ದಾರೆ.
ಓಣಂ ಹಬ್ಬದ ಮುನ್ನಾದಿನ ದನದ ಆರೋಗ್ಯ ಹದಗೆಟ್ಟ ಬಗ್ಗೆ ವಿನೀಶ ಕುಂಬಳೆ ಮೃಗ ಆಸ್ಪತ್ರೆಯ ಡಾ| ಅರುಣ್ ರಾಜ್‌ರಿಗೆ ತಿಳಿಸಿದ್ದಾರೆ. ಅವರು ಬಂದು ನೋಡಿದಾಗ ಕರುವಿನ ಗಾತ್ರ ದೊಡ್ಡದಾದ ಕಾರಣ ಆಪರೇಶನ್ ಮಾಡಬೇಕೆಂದು ತೀರ್ಮಾನಿಸಿದರು. ಅದಕ್ಕೆ ನಿವೃತ್ತ ವೈದ್ಯ ಬಾಲಚಂದ್ರ ರಾವ್ ಹಾಗೂ ಕಾಞಂಗಾಡ್‌ನ ಡಾ| ನಿಧೀಶ್ ಸೇರಿ ಶಸ್ತ್ರ ಚಿಕಿತ್ಸೆ ನಡೆಸಿದರು. ಶನಿವಾರ ರಾತ್ರಿ ೧೦.೪೫ಕ್ಕೆ ಆರಂಭಗೊಂಡ ಶಸ್ತ್ರಚಿಕಿತ್ಸೆ ಆದಿತ್ಯವಾದ ಮುಂದುವರಿದಿದ್ದು, ಬಳಿಕ ಕರುವನ್ನು ಹೊರತೆಗೆದು ರಕ್ಷಿಸಲು ಸಾಧ್ಯವಾಗದಿದ್ದರೂ ದನದ ಜೀವ ಉಳಿಯಿತು.
ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ಸಮಯಪ್ರಜ್ಞೆಯಿಂದ ಕಾರ್ಯನಿರತರಾಗಿರುವುದಕ್ಕೆ ಕುಂಬಳೆ ಪರಿಸರದ ಜನತೆ ಶ್ಲಾಘಿಸಿದ್ದಾರೆ.