ದೇಹವೊಂದು, ತಲೆ ಎರಡು : ಮಂಗಳೂರಿನಲ್ಲಿ ವಿಚಿತ್ರ ಕರು ಜನನ
ಮಂಗಳೂರು: ಎರಡು ತಲೆ, ನಾಲ್ಕು ಕಣ್ಣುಗಳನ್ನು ಹೊಂದಿರುವ ಕರುವೊಂದು ಕಿನ್ನಿಗೋಳಿಯಲ್ಲಿ ಜನಿಸಿದೆ. ಇಲ್ಲಿನ ಡಮಾಸ್‌ಕಟ್ಟೆ ದುಜಿಲಗುರಿ ನಿವಾಸಿ ಜಯರಾಮ ಜೋಗಿ ಎಂಬವರ ಹಟ್ಟಿಯ ದನ ಈ ವಿಚಿತ್ರ ಕರುವಿಗೆ ಜನನ ನೀಡಿದೆ. ಎರಡು ಬದಿಗಳಲ್ಲಿ ಎರಡು ತಲೆಯಿದ್ದು, ನಾಲ್ಕು ಕಣ್ಣುಗಳಿವೆ. ಮೂಗು, ಬಾಯಿ, ಕಿವಿ ಎರಡೇ ಇದೆ. ಈ ಕರು ಈಗ ಆರೋಗ್ಯದಿಂದಿದ್ದು, ಆಹಾರ ಸೇವಿಸಲು ಆರಂಭಿಸಿದರೆ ಬದುಕಿ ಉಳಿಯಬಹುದೆಂದು ಡಾಕ್ಟರ್ ತಿಳಿಸಿದ್ದಾರೆ. ಈಗ ಅದಕ್ಕೆ ಎದ್ದು ನಿಲ್ಲಲು ಅಸಾಧ್ಯವಾಗುತ್ತಿದೆ. ತಲೆಯ ಭಾರ ಇದಕ್ಕೆ ಕಾರಣವಾಗಿದ್ದು, ಹಾಲನ್ನು ಬಾಟಲಿಯಲ್ಲಿ ತುಂಬಿಸಿ ಬಾಯಿಗೆ ಎರೆಯಲಾಗುತ್ತಿದೆ. 2016ರಲ್ಲಿ ರಾಜಸ್ಥಾನದ ಉದಯಪುರದಲ್ಲಿ ಇದೇ ರೀತಿಯ ಕರುವೊಂದು ಜನಿಸಿತ್ತೆನ್ನಲಾಗಿದೆ.