ಬಂಬ್ರಾಣ ಜಿಬಿಎಲ್‌ಪಿ ಶಾಲೆಯ ಹೊಸ ಕಟ್ಟಡ ಉದ್ಘಾಟನೆಯಲ್ಲಿ ಮುಸ್ಲಿಂ ಲೀಗ್ ರಾಜಕೀಯ ನಿಲ್ಲಿಸಬೇಕು-ಬಿಜೆಪಿ

ಕುಂಬಳೆ: ಬಂಬ್ರಾಣ ಜಿಬಿಎಲ್‌ಪಿ ಶಾಲೆಗೆ  ಕೆಡಿಎಫ್ ನಿಧಿಯಿಂದ ಹೊಸತಾಗಿ ನಿರ್ಮಿಸಿದ ಕಟ್ಟಡದ ಉದ್ಘಾಟನೆಯಲ್ಲಿ ಮುಸ್ಲಿಂ ಲೀಗ್ ನೇತಾರರು ರಾಜಕೀಯ ನಿಲ್ಲಿಸಬೇಕೆಂದು ಬಿಜೆಪಿ ಉತ್ತರ ವಲಯ ಕಾರ್ಯಕರ್ತರ ಸಭೆ ಆಗ್ರಹಿಸಿದೆ. ಕುಂಬಳೆ ಗ್ರಾಮ ಪಂಚಾಯತ್‌ನ  ಬಂಬ್ರಾಣ ನಾಲ್ಕನೇ ವಾರ್ಡ್‌ನಲ್ಲಿ ಊರಿನ ಜನತೆಯ ಹಲವಾರು ವರ್ಷಗಳ ಕನಸಾಗಿರುವ ಶಾಲೆಯ ಹೊಸ ಕಟ್ಟಡವು  ಸಾಮಾಜಿಕ ಕಾರ್ಯಕರ್ತರ, ಶಾಲೆಯ ರಕ್ಷಾಧಿಕಾರಿಗಳ, ಅಧ್ಯಾಪಕರ ಹಾಗೂ ಸರಕಾರದ ಶಿಕ್ಷಣ ಸಚಿವರ ಪ್ರಯತ್ನದಿಂದ ತಲೆಯೆತ್ತಿ ನಿಂತಿದೆ.  ಆದರೆ ಆಗಸ್ಟ್ 31ರ ವರೆಗೆ ಶಾಲೆಯ ಹಳೆ ಕಟ್ಟಡದಲ್ಲಿ ಮಕ್ಕಳಿಗೆ ತರಗತಿಯಲ್ಲಿರಲು ಪಂಚಾಯತ್‌ನ ಅಸಿಸ್ಟೆಂಟ್ ಇಂಜಿನಿಯರ್ ಅವಕಾಶ ಕೊಟ್ಟಿದ್ದರು. 2023ರ ಶಾಲೆಯ ಆಡಳಿತ ಮಂಡಳಿಯಾದ ಪಿಟಿಎ ಸಮಿತಿಯ ಅವಧಿ ಕಳೆದರೂ ಮುಸ್ಲಿಂ ಲೀಗ್ ನಾಯಕರ ಅಧಿಕಾರದ ಆಸೆ ಮುಗಿಯದೆ ಇರುವುದರಿಂದ ಆಗಸ್ಟ್ 15ಕ್ಕೆ ಕೊನೆಗೊಂಡ ಪಿಟಿಎ ಕಾಲಾವಧಿಯನ್ನು ಆಗಸ್ಟ್ 31ರ ವರೆಗೆ ಮುಸ್ಲಿಂ ಲೀಗ್ ನಾಯಕರ  ಹೇಳಿಕೆಯಂತೆ ಶಾಲೆಯ ಮುಖ್ಯೋ ಪಾಧ್ಯಾಯರು ಮುಂದೂಡಿದರು. ಆದರೆ ಇದರ ವಿರುದ್ಧ ಗ್ರಾಮಸ್ಥರು ಹಾಗೂ ಶಾಲೆಯ ರಕ್ಷಕರು ವಿರೋಧ ವ್ಯಕ್ತಪಡಿಸಿದ ಕಾರಣ ಶಾಲೆಯಲ್ಲಿ ಸೆ. ೫ರಂದು  ಪಿಟಿಎ ಸಭೆ ಕರೆದು ಹೊಸ ಪಿಟಿಎ ರೂಪೀಕರಿಸಲಾಯಿತು.  ಶಾಲೆಯ ವಿಚಾರದಲ್ಲಿ ಕೇವಲ ರಾಜಕೀಯ ಉದ್ದೇಶವನ್ನಿಟ್ಟು ಕೊಂಡು ಮುಸ್ಲಿಂ ಲೀಗ್ ನೇತಾರ, ಮಾಜಿ ಪಿಟಿಎ ಅಧ್ಯಕ್ಷ ಶಾಲೆಯ ಕಟ್ಟಡ ಉದ್ಘಾಟನೆಯ ಸಂದರ್ಭದಲ್ಲಿ ತನ್ನ ಹೆಸರು ಮುಂಚೂಣಿಯಲ್ಲಿ ಬರಬೇಕು, ಶಾಲಾ ಕಟ್ಟಡದ ಶಿಲಾನ್ಯಾಸ ಫಲಕದಲ್ಲಿ ನನ್ನ ಹೆಸರು ಬರಬೇಕು ಎಂದು ಹಠ  ಹಿಡಿದ ಕಾರಣ ಈ ಉದ್ಘಾಟನೆ ವಿಳಂಬವಾಗುತ್ತಿದೆ. ಈ ವಿಚಾರದಲ್ಲಿ ಕುಂಬಳೆ ಪಂಚಾಯತ್‌ನಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ನೇತಾರರನ್ನು ಸೇರಿಸಿ ಶಾಲಾ ಕಟ್ಟಡದ ಉದ್ಘಾಟ ನೆಯ ದಿನಾಂಕವನ್ನು ನಿಗದಿಪಡಿಸಿ  ಹೊಸ ಸ್ವಾಗತ ಸಮಿತಿ ರೂಪೀಕರಿಸಲಾಗಿತ್ತು.  ಈ ಸಮಿತಿ ಸಭೆ  ಶಾಲೆಯ ನೂತನ ಪಿಟಿಎ ಅಧ್ಯಕ್ಷರ  ಹಾಗೂ ಕುಂಬಳೆ ಗ್ರಾಮ ಪಂಚಾಯತ್‌ನ ಅಧ್ಯಕ್ಷೆಯ ನೇತೃತ್ವದಲ್ಲಿ ನಡೆಯಿತು. ರಾಜ್ಯ ಸಚಿವ ಉದ್ಘಾಟನೆಗೆ  ಬರುವುದಾಗಿ ತಿಳಿಸಿದ್ದರು. ಆದರೆ ರಾಜಕೀಯ ಕಚ್ಚಾಟದಲ್ಲಿ ಉದ್ಘಾಟನೆ ನಿಂತುಹೋಗಿದೆ. ಪಿಟಿಎ ಅವಧಿ ಮುಗಿದರೂ  ಶಾಲೆಯ ಹಿಡಿತ ಬೇರೆ ಯಾರಿಗೂ ಹೋಗಬಾರದೆಂದು ಮುಸ್ಲಿಂ ಲೀಗ್ ನೇತಾರನ ಅತಿಯಾದ ರಾಜಕೀಯ ವ್ಯಾಮೋಹ  ಈ ಉದ್ಘಾಟನೆ ಮೊಟಕುಗೊಳ್ಳಲು ಕಾರಣವಾಗಿದೆ. ಹೊಸ ಕಟ್ಟಡದ ಉದ್ಘಾಟನೆಗೆ ಹಲವಾರು ಬಾರಿ ದಿನಾಂಕ ನಿಗದಿಯಾದರೂ ಉದ್ಘಾಟಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹಳೆಯ ಕಟ್ಟಡದಲ್ಲಿ ಇನ್ನು ಮುಂದೆ ತರಗತಿ ನಡೆಸಲು ಅಸಾಧ್ಯವಾಗಿರುವುದರಿಂದ  ಶಾಲೆಯ ಅಧ್ಯಾಪಕ ವೃಂದ ಇಕ್ಕಟ್ಟಿನಲ್ಲಿ ಸಿಲುಕಿದೆ. ಸೆ. 23ಕ್ಕೆ ಶಾಲೆ ತೆರೆಯುವುದರಿಂದ  ಮಕ್ಕಳ ಸುರಕ್ಷತೆ ಅಂಗವಾಗಿ ಹೊಸ ಕಟ್ಟಡದಲ್ಲಿ ತರಗತಿ ಆರಂಭಿಸಲು ಶಾಲೆಯ ಹೊಸ  ಪಿಟಿಎ ಹಾಗೂ ಅಧ್ಯಾಪಕ ವೃಂದ ತೀರ್ಮಾನಿಸಿತ್ತು.

ಆದರೆ  ಇದೇ ಸಮಯದಲ್ಲಿ ಶಾಲೆಯ ಪಿಟಿಎ ಸೇರದೆ ಊರಿನ ಯಾರಿಗೂ ತಿಳಿಸದೆ ಮಂಜೇಶ್ವರ ಶಾಸಕರು ಹಾಗೂ   ಮುಸ್ಲಿಂ ಲೀಗ್ ನೇತಾರರ ಉಪಸ್ಥಿತಿಯಲ್ಲಿ ಆದಿತ್ಯವಾರ ಹೊಸ ಕಟ್ಟಡವನ್ನು  ಉದ್ಘಾಟಿಸಲು ಪಂಚಾಯತ್ ಹಾಗೂ ಮಾಜಿ ಪಿಟಿಎ ಅಧ್ಯಕ್ಷರು ತೀರ್ಮಾನಿಸಿದ್ದರು. ನಾಡಿಗೆ ಹೊಸತಾಗಿ ಬಂದ ಕಟ್ಟಡವನ್ನು ಯಾವುದೇ ಆಡಂಬರವಿಲ್ಲದೆ ಉದ್ಘಾಟಿಸುವುದನ್ನು ನಾಗರಿಕರು ಹಾಗೂ ಶಾಲೆಯ ರಕ್ಷಕರು ವಿರೋಧಿಸಿದ ಪರಿಣಾಮ ಶಾಲಾ ಮಕ್ಕಳಿಗೆ ಉಪಯೋಗವಾ ಗುವ ರೀತಿಯಲ್ಲಿ  ಹೊಸ ಕಟ್ಟಡದ ತರಗತಿಯನ್ನು ಉಪಯೋಗಿಸಿ  ಮುಂದಿನ ದಿನಗಳಲ್ಲಿ ಶಾಲಾ ಕಟ್ಟಡವನ್ನು ಉದ್ಘಾಟಿಸಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಅದೇ ರೀತಿ ಹೊಸ ಕಟ್ಟಡದ ಸಮೀಪ ಹಾಗೂ ಶಾಲೆ ಒಳಗೆ ಅನಧಿಕೃವಾಗಿರುವ ರಸ್ತೆಗಳನ್ನು ಮುಚ್ಚುಗಡೆಗೊಳಿಸಿ  ಹೊಸ ತಡೆಗೋಡೆ ನಿರ್ಮಿಸಿ ಮುಂದಿನ ದಿನಗಳಲ್ಲಿ ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ಹೊಸ ಪಿಟಿಎ ಸಮಿತಿ, ಅಧ್ಯಾಪಕ ವೃಂದದವರು ಹಾಗೂ ಪಂಚಾಯತ್ ಆಡಳಿತ ಮಂಡಳಿ ಪ್ರಯತ್ನಿಸಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಶಾಲೆಯ ಆಡಳಿತ ಸಮಿತಿಯ ಅಂಗವಾದ ಶಾಲಾ ಮೆನೇಜ್‌ಮೆಂಟ್ ಸಮಿತಿಯಲ್ಲಿ ಮಾಜಿ ಪಿಟಿಎ ಅಧ್ಯಕ್ಷ ಮುಂದುವರಿಯುವುದು  ನಾಚಿಕೆಯ ವಿಚಾರ. ಮುಸ್ಲಿಂ ಲೀಗ್ ನೇತಾರ ಎಸ್‌ಎಂಸಿ ಚೆಯರ್ ಮೆನ್ ಸ್ಥಾನದಲ್ಲಿ ಮುಂದುವರಿಯುವುದು ಕಾನೂನುಬಾಹಿರ. ಶಾಲೆಯ ಹೊಸ ಪಿಟಿಎ ಜೊತೆ ಹೊಸ ಎಸ್‌ಎಂಸಿ ಸಮಿತಿ ರೂಪೀಕರಿಸಬೇಕೆಂದು ಸಭೆಯಲ್ಲಿ ಆಗ್ರಹಪಡಲಾಯಿತು. ಸಭೆಯಲ್ಲಿ  ಬಿಜೆಪಿ ಉತ್ತರವಲಯ ಅಧ್ಯಕ್ಷ ಪ್ರದೀಪ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.  ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು. ನೇತಾರರಾದ ರಾಧಾಕೃಷ್ಣ ರೈ ಮಡ್ವ, ಮಹೇಶ್ ಪುಣಿಯೂರು, ವಿಘ್ನರಾಜ ಕಳತ್ತೂರು ಉಪಸ್ಥಿತರಿದ್ದರು.  ರಚನಾ ಸ್ವಾಗತಿಸಿ, ಪಂಚಾಯತ್ ಸದಸ್ಯ ಮೋಹನ ಕೆ ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page