ರಾಜ್ಯದಲ್ಲಿ ವಲಸೆ ಕಾರ್ಮಿಕರ ಸಂಖ್ಯೆ 25ಲಕ್ಷಕ್ಕೇರಿಕೆ
ಕಾಸರಗೋಡು: ಕೇರಳದಲ್ಲಿ ಹೊರ ರಾಜ್ಯಗಳಿಂದ ಬಂದು ದುಡಿಯುತ್ತಿರುವ ವಲಸೆ ಕಾರ್ಮಿಕರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. 2013ರಲ್ಲಿ ಗುಲತಿ ಇನ್ಸ್ಟಿಟ್ಯೂಟ್ ಆಫ್ ಫಿನಾನ್ಸ್ ಆಂಡ್ ಟಾಕ್ಸೇಷನ್ ನಡೆಸಿದ ಅಧ್ಯಯನ ವರದಿಯಲ್ಲಿ ಅಂದು ಕೇರಳದಲ್ಲಿ ಹೊರರಾಜ್ಯಗಳಿಂದ ಬಂದ 23.5 ಲಕ್ಷ ವಲಸೆ ಕಾರ್ಮಿಕರು ವಿವಿಧ ಜಿಲ್ಲೆಗಳಲ್ಲಾಗಿ ದುಡಿಯುತ್ತಿದ್ದಾರೆಂದು ತಿಳಿಸಲಾಗಿತ್ತು. ಈಗ ವಲಸೆ ಕಾರ್ಮಿಕರ ಸಂಖ್ಯೆ ೩೫ ಲಕ್ಷಕ್ಕೇರುವುದಾಗಿಯೂ ಅಂದಾಜು ಲೆಕ್ಕ ಹಾಕಲಾಗಿದೆ.
ಹೀಗೆ ಹೊರರಾಜ್ಯಗಳಿಂದ ಕೇರಳಕ್ಕೆ ಬಂದು ದುಡಿಯುತ್ತಿರುವ ವಲಸೆ ಕಾರ್ಮಿಕರಲ್ಲಿ ಬಹುಪಾಲು ಮಂದಿ ಉತ್ತಮ ನಡತೆ ಹೊಂದಿದವರಾಗಿದ್ದು, ಯಾವುದೇ ರೀತಿಯ ಅಡ್ಡದಾರಿಗಳಲ್ಲಿ ತೊಡಗದವರೂ ಆಗಿದ್ದಾರೆ. ಆದರೆ ಇವರ ಸೋಗಿನಲ್ಲಿ ಬಾಂಗ್ಲಾ ದೇಶ, ಮ್ಯಾನ್ಮಾರ್ ಮೊದಲಾದ ರಾಷ್ಟ್ರಗಳಿಂದ ಕಾರ್ಮಿಕರ ಸೋಗಿನಲ್ಲಿ ಸಾವಿರಾರು ಮಂದಿ ಭಾರತಕ್ಕೆ ಅಕ್ರಮವಾಗಿ ನುಸುಳಿ ಇಲ್ಲಿ ದೇಶದ್ರೋಹ ಕೃತ್ಯಗಳು, ದರೋಡೆ ಇತ್ಯಾದಿ ದುಷ್ಕೃತ್ಯಗಳಲ್ಲಿ ತೊಡಗುತ್ತಿದ್ದಾರೆ.
ಹೀಗೆ ಕೇರಳಕ್ಕೆ ಬಂದು ಇಲ್ಲಿ ಕ್ರಿಮಿನಲ್ ಕೃತ್ಯ ನಡೆಸಿರುವ 10,546 ರಷ್ಟು ವಲಸೆಕಾರ್ಮಿಕರ ವಿರುದ್ಧ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳ ದಾಖಲುಗೊಂಡಿದೆ. ಇದರಲ್ಲಿ 168 ಮಂದಿ ಕೊಲೆ ಪ್ರಕರಣಗಳ ಆರೋಪಿಗಳಾಗಿದ್ದಾರೆ.
ಇವರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆದ 127 ಕೊಲೆ ಪ್ರಕರಣಗಳ ಆರೋಪಿಗಳಾಗಿದ್ದಾರೆ. ಪುಟ್ಟ ಮಕ್ಕಳನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಬಳಿಕ ಕೊಂದ ಪ್ರಕರಣಗಳ ಆರೋಪಿಗಳೂ ಇದರಲ್ಲಿ ಒಳಗೊಂಡಿದ್ದಾರೆ. ಇದರ ಹೊರತಾಗಿ ಕೊಲೆಯತ್ನ, ದರೋಡೆ, ಕಳವು, ಲೈಂಗಿಕ ಕಿರುಕುಳ, ಪೋಕ್ಸೋ ಪ್ರಕರಣಗಳ ಆರೋಪಿಗಳೂ ಇದರಲ್ಲಿ ಒಳಗೊಂಡಿದ್ದಾರೆ. ಇಂತಹ ಕ್ರಿಮಿನಲ್ ಸ್ವಭಾವ ಹೊಂದಿರುವ ವಲಸೆ ಕಾರ್ಮಿಕರು ಕೇರಳಕ್ಕೆ ದೊಡ್ಡ ಬೆದರಿಕೆಯಾಗಿ ಪರಿಣಮಿಸತೊಡಗಿದ್ದಾರೆ.