ವಿಷ ಸೇವಿಸಿದ ಯುವತಿಯ ಹೇಳಿಕೆ ದಾಖಲಿಸಲು ಆಸ್ಪತ್ರೆಗೆ ತಲುಪಿದ ಮೆಜಿಸ್ಟ್ರೇಟರಿಗೆ ಅಗೌರವ: ಇಬ್ಬರು ಡಾಕ್ಟರ್‌ಗಳ ವಿರುದ್ಧ ಕೇಸು
ಕಾಸರಗೋಡು: ಪ್ರೇಮ ವೈಫಲ್ಯದಿಂದ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವತಿಯ ರಹಸ್ಯ ಹೇಳಿಕೆ ದಾಖಲಿಸಲು ತೆರಳಿದ ಮೆಜಿಸ್ಟ್ರೇಟ್‌ರೊಂದಿಗೆ ಅಗೌರವ ತೋರಿಸಿರುವುದಾಗಿ ದೂರಲಾಗಿದೆ. ಸುಳ್ಯ ಸರಕಾರಿ ಆಸ್ಪತ್ರೆಯ ಇಬ್ಬರು ಡಾಕ್ಟರ್‌ಗಳ ವಿರುದ್ಧ ಸುಳ್ಯ ಪೊಲೀಸರು ಕೇಸು ದಾಖಲಿಸಿದ್ದಾರೆ. ಈ ತಿಂಗಳ 21ರಂದು ಕೇಸಿಗೆ ಆಸ್ಪದವಾದ ಘಟನೆ ನಡೆದಿದೆ. ದೇಲಂಪಾಡಿ ನಿವಾಸಿಯಾದ 29ರ ಹರೆಯದ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಈಕೆಯನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆಯಲ್ಲಿ ಆದೂರು ಪೊಲೀಸರು ಕೇಸು ದಾಖಲಿಸಿ ಈ ವಿಷಯವನ್ನು ಮೆಜಿಸ್ಟ್ರೇಟರಿಗೆ ತಿಳಿಸಿದ್ದರು. ಬಳಿಕ ಮೆಜಿಸ್ಟ್ರೇಟರು ಆಸ್ಪತ್ರೆಗೆ ತಲುಪಿದ್ದರು. ಅಸ್ವಸ್ಥ ಸ್ಥಿತಿಯಲ್ಲಿರುವ ಯುವತಿಯಿಂದ ರಹಸ್ಯ ಹೇಳಿಕೆ ದಾಖಲಿಸಲು ತಲುಪಿರುವುದಾಗಿ ಮೆಜಿಸ್ಟ್ರೇಟರು ಕರ್ತವ್ಯ ದಲ್ಲಿದ್ದ ಡಾಕ್ಟರ್‌ಗಳಿಗೆ ತಿಳಿಸಿ, ಹೇಳಿಕೆ ದಾಖಲಿಸಲು ಸೌಕರ್ಯ ಏರ್ಪಡಿಸಬೇಕೆಂದು ಮೆಜಿಸ್ಟ್ರೇಟರು ಆಗ್ರಹಿಸಿದ್ದರು. ಆದರೆ ಲಿಖಿತವಾಗಿ ನೀಡದೆ ಹೇಳಿಕೆ ದಾಖಲಿಸಲು ಸಾಧ್ಯವಿಲ್ಲವೆಂದು ಡಾಕ್ಟರ್‌ಗಳು ನಿಲುವು ತಳೆದರು. ಬಳಿಕ ಮೆಜಿಸ್ಟ್ರೇಟರು ಸುಳ್ಯ ಪೊಲೀಸ್ ಠಾಣೆಗೆ ತಲುಪಿ ದೂರು ನೀಡಿದ್ದು, ಕೇಸು ದಾಖಲಿಸಲಾಗಿದೆ. ಈ ತಿಂಗಳ 19ರಂದು ಯುವತಿ ವಿಷ ಸೇವಿಸಿದ್ದು, 21ರಂದು ಈಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.