ಇಂದು ಬೆಳಿಗ್ಗೆ ಕಾಸರಗೋಡಿನಿಂದ ಪ್ರಾಯೋಗಿಕ ಸಂಚಾರ ನಡೆಸಿದ ವಂದೇ ಭಾರತ್ ಎಕ್ಸ್ಪ್ರೆಸ್
ಕಾಸರಗೋಡು: ಕೇಂದ್ರ ರೈಲ್ವೇ ಇಲಾಖೆ ಕೇರಳಕ್ಕೆ ಕೊಡುಗೆಯಾಗಿ ನೀಡಿರುವ ಎರಡನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಾಡಿಯ ಸೇವೆ ರವಿವಾರದಂದು ಉದ್ಘಾಟನೆ ಗೊಳ್ಳಲಿರುವಂತೆಯೇ ಆ ರೈಲು ಇಂದು ಬೆಳಿಗ್ಗೆ ೭ ಗಂಟೆಗೆ ಕಾಸರಗೋ ಡಿನಿಂದ ತಿರುವನಂತಪು ರದತ್ತ ಪ್ರಾಯೋಗಿಕ ಸಂಚಾರ ನಡೆಸಿತು.
ಕಾಸರಗೋಡು ರೈಲ್ವೇ ಪೊಲೀಸರು, ರೈಲ್ವೇ ಭದ್ರತಾಪಡೆ ಮತ್ತು ರೈಲ್ವೇ ಇಲಾಖೆಯ ಅಧಿಕಾರಿಗಳು ಇದಕ್ಕೆ ಸ್ವಾಗತ ನೀಡಿದರು. ಈ ರೈಲು ನಿನ್ನೆ ರಾತ್ರಿ ೧೧.೪೨ಕ್ಕೆ ಕಾಸರಗೋಡು ನಿಲ್ದಾಣಕ್ಕೆ ಆಗಮಿಸಿತ್ತು. ಈ ರೈಲು ಸೇವೆಯ ಉದ್ಘಾಟನೆಯನ್ನು ಪ್ರಧಾನಮಂತ್ರಿ ನರೇಂದ್ರಮೋದಿಯವರು ರವಿವಾರ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ನಿರ್ವಹಿಸುವರು. ಅದರ ಫ್ಲಾಗ್ ಆಫ್ ಅಂದು ಮಧ್ಯಾಹ್ನ ೧೨.೩೦ಕ್ಕೆ ಕಾಸರಗೋಡು ರೈಲು ನಿಲ್ದಾಣದಲ್ಲಿ ನಡೆಯಲಿದೆ. ಇದು ಮಾತ್ರವಲ್ಲ ದೇಶದ ವಿವಿಧ ರಾಜ್ಯಗಳಲ್ಲಾಗಿ ಒಟ್ಟು ೯ ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆಯ ಉದ್ಘಾಟನೆಯನ್ನು ಪ್ರಧಾನಮಂತ್ರಿ ಅಂದೇ ಒಟ್ಟಿಗೆ ನಿರ್ವಹಿಸುವರು.
ರವಿವಾರ ಉದ್ಘಾಟನೆಗೊಳ್ಳಲಿ ರುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಅಂದೇ ಸಂಚಾರ ನಡೆಸದು. ಮಂಗಳವಾರದಿಂದ ಅಧಿಕೃತ ಸೇವೆ ಆರಂಭಿಸಲಿದೆ. ಕಾಸರಗೋಡಿನಿಂದ ಆಲಪ್ಪುಳ ದಾರಿಯಾಗಿ ಈ ಹೊಸ ರೈಲು ಸೇವೆ ತಿರುವನಂತಪುರ ತನಕ ಸೇವೆ ನಡೆಸಲಿದೆ. ಉದ್ಘಾಟನೆ ಬಳಿಕ ಸೇವೆ ಆರಂಭಿಸುವ ಈ ರೈಲಿಗೆ ಪಯ್ಯನ್ನೂರು, ಕಣ್ಣೂರು, ತಲಶ್ಶೇರಿ, ಕಲ್ಲಿಕೋಟೆ, ತಿರೂರು, ಶೋರ್ನೂರು, ತೃಶೂರು, ಎರ್ನಾಕುಳಂ, ಆಲಪ್ಪುಳ, ಕಾಯಂಕುಳಂ ಮತ್ತು ಕೊಲ್ಲಂ ನಿಲ್ದಾಣಗಳಲ್ಲಿ ಅದ್ದೂರಿಯ ಸ್ವಾಗತ ನೀಡಲಾಗುವುದು.ಎರಡನೇ ವಂದೇ ಭಾರತ್ ರೈಲು ಉದ್ಘಾಟನೆಗೊಂಡ ಬಳಿಕ ಪ್ರತಿದಿನ ಬೆಳಿಗ್ಗೆ ೭ಕ್ಕೆ ಕಾಸರಗೋಡಿನಿಂದ ಪ್ರಯಾಣ ಆರಂಭಿಸಿ ಸಂಜೆ ೩.೦೫ಕ್ಕೆ ತಿರುವನಂತಪುರ ತಲುಪಿ ಬಳಿಕ ತಿರುವನಂತಪುರದಿಂದ ಸಂಜೆ ೪.೦೫ಕ್ಕೆ ಹೊರಟು ರಾತ್ರಿ ೧೧.೫೫ಕ್ಕೆ ಕಾಸರಗೋಡಿಗೆ ತಲುಪುವ ರೀತಿಯಲ್ಲಿ ಈ ರೈಲು ಸೇವೆಯ ಸಮಯ ಕ್ರಮೀಕರಿಸಲಾಗಿದೆ.
ಕಾಸರಗೋಡು, ಕಣ್ಣೂರು ಮತ್ತು ಕಲ್ಲಿಕೋಟೆ ಜಿಲ್ಲೆಯವರಿಗೆ ನ್ಯಾಯಾಲಯ ಸಹಿತ ವಿವಿಧ ಅಗತ್ಯಗಳಿಗೆ ಕೊಚ್ಚಿಗೆ ತೆರಳುವವರಿಗೆ ಮಧ್ಯಾಹ್ನದ ಮೊದಲೇ ತಲುಪಲು ಈ ಸಮಯ ಅನುಕೂಲವಾಗಲಿದೆ.