ವಿವಾದಗಳ ಕಾವಿನ ಮಧ್ಯೆ ರಾಜ್ಯ ವಿಧಾನಸಭಾ ಅಧಿವೇಶನ ನಾಳೆಯಿಂದ

ತಿರುವನಂತಪುರ: ರಾಜಕೀಯ ವಿವಾದಗಳ ಭಾರೀ ಕಾವಿನ ಮಧ್ಯೆ ರಾಜ್ಯ ವಿಧಾನಸಭಾ ಅಧಿವೇಶನ ನಾಳೆ ಆರಂಭಗೊಳ್ಳಲಿದೆ.

ತೃಶೂರು ಪೂರಂನ್ನು ಅಲ್ಲೋಲಕಲ್ಲೋಲಗೊಳಿಸಿದ ವಿಷಯ, ಎಡಿಜಿಪಿ-ಆರ್‌ಎಸ್‌ಎಸ್ ನೇತಾರರ ಮಧ್ಯೆ ನಡೆದ ಸಂವಾದ, ಸರಕಾರ ಮತ್ತು  ಮುಖ್ಯಮಂತ್ರಿಯ ವಿರುದ್ಧ ಶಾಸಕ ಪಿ.ವಿ. ಅನ್ವರ್ ನೀಡಿರುವ ವಿವಾದಾತ್ಮಕ ಹೇಳಿಕೆಗಳು, ಮಲಪ್ಪುರಂ ಜಿಲ್ಲೆ ಬಗ್ಗೆ ಆಂಗ್ಲ ಪತ್ರಿಕೆಯೊಂದಕ್ಕೆ ಮುಖ್ಯಮಂತ್ರಿ ನೀಡಿರುವ ವಿವಾದಾತ್ಮಕ ಹೇಳಿಕೆ ಹಾಗೂ ರಾಜ್ಯ ಎದುರಿಸುತ್ತಿರುವ ಇತರ ಜ್ವಲಂತ ಸಮಸ್ಯೆಗಳನ್ನು ಎತ್ತಿ ಹಿಡಿದು ವಿಪಕ್ಷಗಳು ವಿಧಾನಸಭೆಯಲ್ಲಿ ಸರಕಾರದ ವಿರುದ್ಧ ಮುಗಿಬೀಳುವ ಸರ್ವ ಸಿದ್ಧತೆಗಳನ್ನು ಈಗಾಗಲೇ ನಡೆಸಿದೆ. ಇದರಿಂದಾಗಿ ವಿಧಾನಸಭಾ ಅಧಿವೇಶನ ಅಲ್ಲೋಲಕಲ್ಲೋಲಗೊಳ್ಳುವ ಸಾಧ್ಯತೆ ಇದೆ. ಇದನ್ನು ಸರಕಾರ ಹೇಗೆ ನಿಭಾಯಿಸಲಿದೆಯೆಂಬುವುದನ್ನು ಇನ್ನಷ್ಟೇ ಕಾದು ನೋಡಬೇಕಾಗಿದೆ.

ವಿಧಾನಸಭಾ ಅಧಿವೇಶನದ ಮೊದಲ ದಿನವಾದ ನಾಳೆ ವಯನಾಡು ದುರಂತದಲ್ಲಿ ಸಾವನ್ನಪ್ಪಿದವರಿಗೆ ಶ್ರದ್ಧಾಂಜಲಿ ಅರ್ಪಿಸಿದ  ಬಳಿಕ ನಾಳಿನ ಕಲಾಪ ಅಲ್ಲಿಗೇ ಮುಕ್ತಾಯಗೊಳ್ಳಲಿದೆ. ಅಕ್ಟೋಬರ್ 18ರ ತನಕ ಅಧಿವೇಶನ ಮುಂದುವರಿಯಲಿದೆ.  ಅಕ್ಟೋಬರ್ 7ರಿಂದ 11ರ ತನಕ ನಿರಂತರ ಅಧಿವೇಶನ ನಡೆಯಲಿದೆ. ಅಕ್ಟೋಬರ್ 12ರಿಂದ 15ರ ತನಕ ರಜಾದಿನವಾಗಿ ರುವುದರಿಂದ ಈ ದಿನಗಳಲ್ಲಿ ಅಧಿವೇ ಶನ ನಡೆಯದು. ನಂತರ ಅಕ್ಟೋಬರ್  16ಕ್ಕೆ ಪುನರಾರಂಭಗೊಳ್ಳುವ ಅಧಿವೇಶನ 18ರ ತನಕ ಮುಂದು ವರಿದು  ನಂತರ ಕೊನೆಗೊಳ್ಳಲಿದೆ.

ಒಟ್ಟು 8 ವಿಧೇಯಕಗಳನ್ನು ವಿಧಾನಸಭೆಯ ಅನುಮೋದನೆಗಾಗಿ ಮಂಡಿಸಲು ಸರಕಾರ ತೀರ್ಮಾನಿಸಿದೆ. 2023ರ ಕೇರಳ ಸಾರ್ವಜನಿಕ ವಿಧೇಯಕ, ಕೇರಳ ವೆಟರ್ನರಿ ಆಂಡ್ ಎನಿಮಲ್ ಸಯನ್ಸ್ ಯೂನಿವರ್ಸಿಟಿ ತಿದ್ದುಪಡಿ ವಿಧೇಯಕ, 2023ರ ಕೇರಳ ಜಾನುವಾರು ಸಂತಾನೋತ್ಪತ್ತಿ ವಿಧೇಯಕ, ಕೇರಳ ಪಬ್ಲಿಕ್ ಸರ್ವೀಸ್ ಕಮಿಶನ್ ತಿದ್ದುಪಡಿ ಮಸೂದೆ, ಕೇರಳ ಜನರಲ್ ಸೇಲ್ಸ್ ಟ್ಯಾಕ್ಸ್ ತಿದ್ದುಪಡಿ ಮಸೂದೆ, 2024ರ ಆನಿವಾಸಿ ಕೇರಳೀಯ ಕಲ್ಯಾಣ ತಿದ್ದುಪಡಿ ಮಸೂದೆ ಮತ್ತು ಪೇಮೆಂಟ್ ಆಫ್ ಸ್ಯಾಲರೀಸ್ ಆಂಡ್ ಅಲವೆನ್ಸ್ ತಿದ್ದುಪಡಿ ಮಸೂದೆಯನ್ನು ಈ ಅಧಿವೇಶನದಲ್ಲಿ ಸರಕಾರ ಸದನದ ಅನುಮೋದನೆಗಾಗಿ ಮಂಡಿಸಲಿದೆ.

Leave a Reply

Your email address will not be published. Required fields are marked *

You cannot copy content of this page