ಕಟ್ಟಡ ಸಿದ್ಧವಾದರೂ ಉದ್ಘಾಟನೆಗೆ ಮೀನ-ಮೇಷ: ಬೇಕೂರು ಕುಟುಂಬಕ್ಷೇಮ ಕೇಂದ್ರ ಶೀಘ್ರ ಉದ್ಘಾಟಿಸಲು ಆಗ್ರಹ
ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನ ಬೇಕೂರು ಕುಟುಂಬಕ್ಷೇಮ ಕೇಂದ್ರದ ನೂತನ ಕಟ್ಟಡದ ಕಾಮಗಾರಿ ಪೂರ್ತಿಗೊಂಡಿದ್ದರೂ ಉದ್ಘಾಟನೆಗೆ ಮೀನ-ಮೇಷ ಎಣಿಸುತ್ತಿರುವುದಾಗಿ ದೂರಲಾಗಿದೆ. ಶಾಸಕರ ನಿಧಿಯಿಂದ ಸುಮಾರು ೨೫ ಲಕ್ಷರೂ. ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡವನ್ನು ಕಾಮಗಾರಿ ಮುಗಿಸಿ ಗುತ್ತಿಗೆದಾರ ಬಿಟ್ಟುಕೊಟ್ಟಿದ್ದರೂ ಉದ್ಘಾಟನೆ ವಿಳಂಬಗೊಳ್ಳುತ್ತಿದೆ. ವಯರಿಂಗ್ ಹಾಗೂ ಆವರಣಗೋಡೆ ಕೆಲಸಗಳಷ್ಟೇ ಇನ್ನು ಬಾಕಿ ಉಳಿದಿದ್ದು, ಇದಕ್ಕೂ ಪಂಚಾಯತ್‌ನಿಂದ ಹಣ ಮಂಜೂರುಗೊಂಡಿರುವುದಾಗಿ ಹೇಳಲಾಗುತ್ತಿದೆ. ಈ ಕೇಂದ್ರ ಸುಮಾರು ೬೦ ವರ್ಷಗಳ ಕಾಲ ಹೆಂಚು ಹಾಸಿದ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿತ್ತು. ಕ್ರಮೇಣ ಶೋಚನೀಯ ಸ್ಥಿತಿಗೆ ತಲುಪಿದ ಈ ಕಟ್ಟಡದ ದುರವಸ್ಥೆ ಬಗ್ಗೆ ವರದಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯರು ಹಾಗೂ ವಾರ್ಡ್ ಪ್ರತಿನಿಧಿಗಳ ನಿರಂತರ ಒತ್ತಾಯದ ಫಲವಾಗಿ ಸುಸಜ್ಜಿತವಾದ ಕಟ್ಟಡ ನಿರ್ಮಾಣಗೊಂಡಿದೆ. ಆದರೂ ಊಟಕ್ಕಿಲ್ಲದ ಉಪ್ಪಿನಕಾಯಿಯಂ ತಾದ ಈ ಕಟ್ಟಡ ಉದ್ಘಾಟನೆಗೊಳ್ಳದಿರುವ ಬಗ್ಗೆ ಸ್ಥಳೀಯರಲ್ಲಿ ಅಸಮಾಧಾನ ತಲೆಯೆತ್ತಿದೆ. ಈಗ ಕುಟುಂಬಕ್ಷೇಮ ಕೇಂದ್ರ ಶಾಲೆಯೊಂದರ ಕೊಠಡಿಯಲ್ಲಿ ಕಾರ್ಯಾಚರಿಸುತ್ತಿದ್ದು, ಉಳಿದಿರುವ ಕೆಲಸ ಕಾರ್ಯಗಳನ್ನು ಶೀಘ್ರ ಮುಗಿಸಿ ಉದ್ಘಾಟನೆ ನಡೆಸಿ ಲೋಕಾರ್ಪಣೆಗೈಯ್ಯಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.