ಮಂಜೇಶ್ವರ ಚುನಾವಣೆ ತಕರಾರು ಅರ್ಜಿ: ಕೆ. ಸುರೇಂದ್ರನ್ ಸಹಿತ ಆರು ಮಂದಿಯನ್ನು ದೋಷಮುಕ್ತಗೊಳಿಸಿ ನ್ಯಾಯಾಲಯ ತೀರ್ಪು

ಕಾಸರಗೋಡು: ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆ ವೇಳೆ ಬಿಎಸ್‌ಪಿ ಅಭ್ಯರ್ಥಿಯಾಗಿದ್ದ ಕೆ. ಸುಂದರರಿಗೆ ಹಣ ಹಾಗೂ ಮೊಬೈಲ್ ಫೋನ್ ನೀಡಿ  ಅವರ ನಾಮಪತ್ರವನ್ನು ಹಿಂತೆಗೆದುಕೊಳ್ಳುವಂತೆ ಮಾಡಲಾಯಿತೆಂದು ಆರೋಪಿಸಿ ನೀಡಲಾದ ದೂರಿನಂತೆ ಬಿಜೆಪಿ ರಾಜ್ಯ ಅಧ್ಯಕ್ಷರೂ, ಮಂಜೇಶ್ವರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಕೆ. ಸುರೇಂದ್ರನ್ ಸಹಿತ ಆರು ಮಂದಿ ವಿರುದ್ಧ ದಾಖಲಿಸಲಾದ ಪ್ರಕರಣ ವನ್ನು ನ್ಯಾಯಾಲಯ ರದ್ದುಪಡಿಸಿ ಅವರನ್ನು ದೋಷಮುಕ್ತಗೊಳಿಸಿದೆ.  2021ರಲ್ಲಿ ನಡೆದ ಚುನಾವಣೆ ವೇಳೆ ಬಿಎಸ್‌ಪಿ ಅಭ್ಯರ್ಥಿಯಾಗಿದ್ದ ಕೆ. ಸುಂದರರಿಗೆ ಹಣ ಹಾಗೂ ಮೊಬೈಲ್ ಫೋನ್ ನೀಡಿ ಅವರನ್ನು ಸ್ಪರ್ಧಾ ಕಣದಿಂದ ಹಿಂಜರಿಸಲಾಯಿತೆಂದು ಆರೋಪಿಸಿ ಎಲ್‌ಡಿಎಫ್ ಅಭ್ಯರ್ಥಿ ಯಾಗಿದ್ದ ವಿ.ವಿ. ರಮೇಶ್  ದೂರು ನೀಡಿದ್ದರು. ಇದರಂತೆ ಮೊದಲು  ಲೋಕಲ್ ಪೊಲೀಸ್ ಹಾಗೂ ಬಳಿಕ ಕ್ರೈಂಬ್ರಾಂಚ್ ತನಿಖೆ ನಡೆಸಿ ನ್ಯಾಯಾಲಯದಲ್ಲಿ ದೋಷಾ ರೋಪ ಪಟ್ಟಿ ಸಲ್ಲಿಸಿತ್ತು. ಆರೋಪ ಪಟ್ಟಿಯಲ್ಲಿ ಕೆ. ಸುರೇಂದ್ರನ್, ಯುವಮೋರ್ಛಾ ಮಾಜಿ ರಾಜ್ಯ ಕೋಶಾಧಿಕಾರಿ ಸುನಿಲ್ ನಾಯ್ಕ್, ಬಿಜೆಪಿ ರಾಜ್ಯ ಸಮಿತಿ ಸದಸ್ಯ ವಿ. ಬಾಲಕೃಷ್ಣ ಶೆಟ್ಟಿ, ಸುರೇಶ್ ವಾಣಿನಗರ, ಜಿಲ್ಲಾ ಕಾರ್ಯದರ್ಶಿ ಕೆ. ಮಣಿಕಂಠ ರೈ, ಲೋಕೇಶ್ ನೋಂಡ ಎಂಬಿವರ ಹೆಸರುಗಳನ್ನು ಸೇರಿಸಲಾಗಿತ್ತು.  ಈ ಪ್ರಕರಣವನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ದೋಷಾರೋಪ ಪಟ್ಟಿಯಲ್ಲಿದ್ದ  ಈ ಆರು ಮಂದಿ  ನ್ಯಾಯವಾದಿ ಕೆ. ಶ್ರೀಕಾಂತ್ ಮೂಲಕ ಕಾಸರಗೋ ಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್  ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪರಿಗಣಿಸಿದ ನ್ಯಾಯಾ ಲಯ ವಾದ-ಪ್ರತಿವಾದಗಳನ್ನು ಆಲಿಸಿದ ಬಳಿಕ ಆರೋಪಪಟ್ಟಿಯಲ್ಲಿದ್ದ ಆರು ಮಂದಿಯನ್ನು ದೋಷಮುಕ್ತಿಗೊಳಿಸಿ ತೀರ್ಪು ನೀಡಿದೆ. 

You cannot copy contents of this page