ಉದ್ಯೋಗ ಹಗರಣ: ಸಿಬಿಐ ತನಿಖೆ ಅಗತ್ಯ-ಅಶ್ವಿನಿ ಎಂ.ಎಲ್
ಕಾಸರಗೋಡು: ಡಿವೈಎಫ್‌ಐ ಕಾಸರಗೋಡು ಜಿಲ್ಲಾ ಮಹಿಳಾ ನೇತಾರೆ ಸಚಿತಾ ರೈ ಸರ್ಕಾರಿ ಸಂಸ್ಥೆಗಳಲ್ಲಿ ಉದ್ಯೋಗಾವಕಾಶದ ಭರವಸೆಯೊಡ್ಡಿ ಹಣ ವಂಚನೆ ಮಾಡಿರುವ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಮಹಿಳಾ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಅಶ್ವಿನಿ ಎಂ.ಎಲ್. ಒತ್ತಾಯಿಸಿದ್ದಾರೆ. ಬಾಡೂರು ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸಚಿತಾ ರೈ ಉದ್ಯೋಗದ ಹೆಸರಲ್ಲಿ ಹಣ ಪಡೆದು ವಂಚಿಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದು, ವಂಚನೆಯ ನೇಮಕಾತಿ ಯೋಜನೆಯ ಹಿಂದೆ ಸಿಪಿಎಂ, ಡಿವೈಎಫ್‌ಐಯ ಹಿರಿಯ ನಾಯಕರನ್ನು ಒಳಗೊಂಡ ದೊಡ್ಡ ದಂಧೆ ಅಡಗಿರುವ ಶಂಕೆ ವ್ಯಕ್ತವಾಗಿದೆ ಎಂದು ಅವರು ತಿಳಿಸಿದರು. ಆರೋಪಿಯು ಆಡಳಿತ ಪಕ್ಷದ ಜಿಲ್ಲಾ ನೇತಾರೆಯಾಗಿರುವುದರಿಂದ ಪೊಲೀಸ್ ತನಿಖೆಯನ್ನು ಬುಡಮೇಲುಗೊಳಿಸಬಹುದು ಅಥವಾ ಹಣ ಹಿಂದಿರುಗಿಸುವ ಮೂಲಕ ಇತ್ಯರ್ಥವಾಗಬಹುದು ಎಂಬ ಆತಂಕವಿದೆ. ಆದ್ದರಿಂದ ಸಿಬಿಐ ತನಿಖೆಯಿಂದ ಮಾತ್ರ ನಿಷ್ಪಕ್ಷಪಾತ ತನಿಖೆಯನ್ನು ಖಚಿತಪಡಿಸಿಕೊಳ್ಳಬಹುದು ಮತ್ತು ಎಲ್ಲಾ ಆರೋಪಗಳನ್ನು ಕಾನೂನಿನ ಮುಂದೆ ತರಬಹುದು. ಈ ಬಗ್ಗೆ ಕೇಂದ್ರ ಗೃಹ ಸಚಿವ ಮಿತ್ ಶಾ ಅವರಿಗೆ ಪತ್ರ ಬರೆಯುವುದಾಗಿಯೂ ಅಶ್ವಿನಿ ಎಂ.ಎಲ್. ತಿಳಿಸಿದ್ದಾರೆ.