ಕಾಸರಗೋಡು: ಕಾಸರಗೋಡು- ಕಾಞಂಗಾಡ್ ರಾಜ್ಯ ರಸ್ತೆಯಲ್ಲಿ ಚಂದ್ರಗಿರಿ ಸೇತುವೆ ಬಳಿ ಇಂಟರ್ಲಾಕ್ ನಡೆಸಿ ದುರಸ್ತಿಗೊಳಿಸಿದ ರಸ್ತೆ ಮತ್ತೆ ಹಾನಿಗೀಡಾಗಿರುವುದು ಭಾರೀ ಪ್ರತಿಭಟನೆಗೆ ಕಾರಣವಾಗಿದೆ. ರಸ್ತೆ ಕಾಮಗಾರಿಯಲ್ಲಿ ನಡೆದ ಲೋಪವೇ ಮತ್ತೆ ಹಾನಿಗೀಡಾಗಲು ಕಾರಣವೆಂದು ಆರೋಪಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಮುಸ್ಲಿಂ ಯೂತ್ ಲೀಗ್ ಕಾಸರಗೋಡು ಮುನಿಸಿಪಲ್ ಕಮಿಟಿ ನೇತೃತ್ವದಲ್ಲಿ ಕಾರ್ಯಕರ್ತರು ಲೋಕೋಪಯೋಗಿ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಿದರು. ಬಳಿಕ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ತೆರವುಗೊಳಿಸಿದರು. ಮುಸ್ಲಿಂ ಯೂತ್ ಲೀಗ್ ರಾಜ್ಯ ಉಪಾಧ್ಯಕ್ಷ ಅಶ್ರಫ್ ಎಡನೀರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಹೀರ್ ಆಸಿಫ್, ಮುನಿಸಿಪಲ್ ಸಮಿತಿ ಅಧ್ಯಕ್ಷ ತಳಂಗರೆ ಹಕೀಂ ಅಜ್ಮಲ್, ಮಂಡಲ ಪ್ರಧಾನ ಕಾರ್ಯದರ್ಶಿ ಹಾರಿಸ್ ಬೆದಿರ ಮೊದಲಾದವರು ಪ್ರತಿಭಟನೆಗೆ ನೇತೃತ್ವ ನೀಡಿದರು.
ಕಾಸರಗೋಡು ಪ್ರೆಸ್ ಕ್ಲಬ್ ಜಂಕ್ಷನ್ನಿಂದ ಚಂದ್ರಗಿರಿ ರಸ್ತೆಯಲ್ಲಿ ೨೫ ಲಕ್ಷ ರೂಪಾಯಿ ಖರ್ಚು ಮಾಡಿ ಇತ್ತೀಚೆಗಷ್ಟೇ ಇಂಟರ್ಲಾಕ್ ಅಳವಡಿಸಲಾಗಿತ್ತು. ಆದರೆ ಕೆಲಸ ಮುಗಿದು ಕೆಲವೇ ಗಂಟೆಗಳೊಳಗಾಗಿ ರಸ್ತೆ ಹಾನಿಗೀಡಾಗಿದೆ.
ವಾಹನಗಳು ಸಂಚರಿಸತೊಡಗಿದಾಗ ಒಂದು ಭಾಗದಲ್ಲಿ ಇಂಟರ್ಲಾಕ್ ಹೂತುಹೋಗಿದ್ದು, ಮತ್ತೊಂದು ಭಾಗದಲ್ಲಿ ಅಲುಗಾಡತೊಡಗಿದೆ. ಭಾರದ ವಾಹನಗಳು ಸಂಚರಿಸಿದುದೇ ಇಂಟರ್ಲಾಕ್ ಹಾನಿಗೀಡಾಗಲು ಕಾರಣವೆಂದು ಸಂಬಂಧಪಟ್ಟವರು ಹೇಳುತ್ತಿದ್ದಾರೆ.
ಪಿಲಿಕುಂಜೆ ಜಂಕ್ಷನ್ನಿಂದ 45 ಮೀಟರ್ ರಸ್ತೆಗೆ 25 ಲಕ್ಷ ರೂಪಾಯಿ ವ್ಯಯಿಸಿ ಇಂಟರ್ಲಾಕ್ ಅಳವಡಿಸಲಾಗಿತ್ತು. ಇದಕ್ಕಾಗಿ ಕಳೆದ ತಿಂಗಳು 25ರಿಂದ ಅಕ್ಟೋಬರ್ 5ರ ವರೆಗೆ ರಸ್ತೆ ಮುಚ್ಚುಗಡೆಗೊಳಿಸಲಾಗಿತ್ತು.