ಕನ್ನಡ ಮ್ಯಾಟ್ರಿಮೊನಿ ಆಪ್ ಮೂಲಕ ಪರಿಚಯ: ಕುಂಬ್ಡಾಜೆ ನಿವಾಸಿಯ 5.67 ಲಕ್ಷ ರೂ. ಯುವತಿ ಲಪಟಾಯಿಸಿರುವುದಾಗಿ ದೂರು
ಬದಿಯಡ್ಕ: ಕನ್ನಡ ಮ್ಯಾಟ್ರಿಮೊನಿ ಆಪ್ ಮೂಲಕ ಪರಿಚಯಗೊಂಡ ಇಂಗ್ಲೆಂಡ್‌ನಲ್ಲಿ ವಾಸಿಸುವ ಯುವತಿ ಕುಂಬ್ಡಾಜೆ ನಿವಾಸಿಯ 5,67,299 ರೂಪಾಯಿ ಲಪಟಾಯಿಸಿರುವುದಾಗಿ ದೂರಲಾಗಿದೆ. ಕುಂಬ್ಡಾಜೆ ಬಳಿಯ ಮವ್ವಾರು ಪಾವೂರು ನಿವಾಸಿ ಪಿ. ಅಶ್ವಿನ್‌ರ ದೂರಿನಂತೆ ಇಂಗ್ಲೆಂಡ್‌ನಲ್ಲಿ ವಾಸಿಸುವ ಪ್ರಿಯಾಂಕ ಎಂಬಾಕೆ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಅವಿವಾಹಿತನಾದ ಅಶ್ವಿನ್ ಕನ್ನಡ ಮ್ಯಾಟ್ರಿಮೊನಿ ಆಪ್ ಮೂಲಕ ಪ್ರಿಯಾಂಕ ಎಂಬ ಹೆಸರಿನಲ್ಲಿ ಪರಿಚಯಗೊಂಡ ಯುವತಿಯನ್ನು ಪರಿಚಯಗೊಂಡಿದ್ದರೆನ್ನಲಾಗಿದೆ. ತಾನು ಇಂಗ್ಲೆಂಡ್‌ನಲ್ಲಿ ವಾಸಿಸುತ್ತಿರುವುದಾಗಿ ಪ್ರಿಯಾಂಕ ತಿಳಿಸಿದ್ದು, ಅನಂತರ ಅವರಿಬ್ಬರು ವಾಟ್ಸಪ್ ಮೂಲಕ ಮಾತುಕತೆ ನಡೆಸಿದ್ದರೆನ್ನಲಾಗಿದೆ. ಈ ಮಧ್ಯೆ ಬೆಲೆಬಾಳುವ ಸಾಮಗ್ರಿಗಳು ಹಾಗೂ ಡಾಲರ್ ಪಾರ್ಸೆಲ್ ಮೂಲಕ ಕಳುಹಿಸಿಕೊಟ್ಟಿರುವುದಾಗಿಯೂ ಅವು ಲಭಿಸಬೇಕಾದರೆ ೫ ಲಕ್ಷ ರೂಪಾಯಿ ಕಳುಹಿಸಿಕೊಡಬೇಕೆಂದು ಪ್ರಿಯಾಂಕ ತಿಳಿಸಿದ್ದಳು. ಇದರಂತೆ 2023 ಡಿಸೆಂಬರ್ 23ರಿಂದ 2024 ಜನವರಿ 8ರ ವರೆಗಿನ ಕಾಲಾವಧಿ ಯಲ್ಲಿ 5,67,299 ರೂಪಾಯಿ ಕಳುಹಿಸಿಕೊಟ್ಟಿರುವುದಾಗಿ ಅಶ್ವಿನ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಹಣ ಕಳುಹಿಸಿಕೊಟ್ಟ ನಂತರ ಪ್ರಿಯಾಂಕಳ ಕುರಿತು ಯಾವುದೇ ಮಾಹಿತಿ ಲಭಿಸಿಲ್ಲ. ಆಕೆ ಕಳುಹಿಸಿ ದ್ದಾಳೆನ್ನಲಾದ ಯಾವುದೇ ಸಾಮಗ್ರಿ ಗಳು ಲಭಿಸಿಲ್ಲ. ಇದರಿಂದ ತಾನು ವಂಚನೆಗೀಡಾದುದಾಗಿ ಅಶ್ವಿನ್‌ರ ಅರಿವಿಗೆ ಬಂದಿದ್ದು, ಅನಂತರ ಪೊಲೀಸರಿಗೆ ದೂರು ನೀಡಿದ್ದಾರೆ.