ಉದ್ಯೋಗ ಭರವಸೆಯೊಡ್ಡಿ ಹಣ ಪಡೆದು ವಂಚನೆ: ಸಚಿತಾ ರೈ ಸಿಪಿಎಂನಿಂದ ಹೊರಕ್ಕೆ

ಕುಂಬಳೆ: ಉದ್ಯೋಗ ಭರವಸೆ ನೀಡಿ ಯುವತಿಯಿಂದ ಹಣ ಪಡೆದು ವಂಚಿಸಿದ ಪ್ರಕರಣದಲ್ಲಿ ಆರೋಪಿಯಾದ ಶೇಣಿ ಬಲ್ತಕ್ಕಲ್ಲು ನವಾಸಿ ಸಚಿತಾ ರೈಯನ್ನು ಪಕ್ಷದ ವಿರುದ್ಧ ಚಟುವಟಿಕೆಯ ಹೆಸರಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಹೊರ ಹಾಕಿರುವುದಾಗಿ ಸಿಪಿಎಂ ಕುಂಬಳೆ ಏರಿಯಾ ಸೆಕ್ರಟರಿ ಸಿ.ಎ. ಸುಬೈರ್ ತಿಳಿಸಿದ್ದಾರೆ. ಸಿಪಿಸಿಆರ್‌ಐಯಲ್ಲಿ ಉದ್ಯೋಗ ಭರವಸೆ ನೀಡಿ ಹಲವರಿಂದ ಹಣ ಪಡೆದು ವಂಚಿಸಿರುವುದಾಗಿಯೂ, ಇದರ ಹಿಂದೆ ಕರ್ನಾಟಕದ ಕೇಂದ್ರ ಆಡಳಿತ ಪಕ್ಷದ ಪ್ರಾದೇಶಿಕ ನೇತಾರರೊಂದಿಗೆ ವಂಚನಾ ತಂಡಕ್ಕೆ ಸಂಬಂಧವಿರುವುದಾಗಿ ಇದೀಗ ಬಹಿರಂಗಗೊಂಡ ವರದಿಗಳಿಂದ ಸಂಶಯಿಸಲಾಗುತ್ತಿದೆ. ಈ ವಿಷಯದಲ್ಲಿ ಪಕ್ಷವನ್ನು ಒಳಪಡಿಸಿ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬರುವ ವರದಿಗಳು ವಾಸ್ತವ ವಿರುದ್ಧವಾಗಿದೆ. ಈ ವಂಚನಾ ಪ್ರಕರಣದಲ್ಲಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಾದ ಎಲ್ಲಾ ವ್ಯಕ್ತಿಗಳ ವಿರುದ್ಧ ಮಾದರಿ ರೀತಿಯಲ್ಲಿ ಶಿಕ್ಷಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಿಪಿಎಂ ಕುಂಬಳೆ ಏರಿಯಾ ಕಮಿಟಿ ಒತ್ತಾಯಿಸಿದೆ. ಇದೇ ವೇಳೆ ಡಿವೈಎಫ್ಐ ನೇತಾರೆ ಕೋಟ್ಯಂತರ ರೂಪಾಯಿ ಲಪಟಾಯಿಸಿದ ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಮುಸ್ಲಿಂ ಯೂತ್‌ಲೀಗ್ ಮಂಜೇಶ್ವರ ಮಂಡಲ ಅಧ್ಯಕ್ಷ ಬಿ.ಎಂ. ಮುಸ್ತಫ, ಪ್ರಧಾನ ಕಾರ್ಯದರ್ಶಿ ಸಿದ್ಧಿಕ್ ದಂಡೆಗೋಳಿ ಒತ್ತಾಯಿಸಿದ್ದಾರೆ.

ಸಿಪಿಸಿಆರ್‌ಐಯಲ್ಲಿ ಉದ್ಯೋಗ ದೊರಕಿಸುವುದಾಗಿ ಭರವಸೆಯೊಡ್ಡಿ 15,05,796 ರೂ. ಪಡೆದು ವಂಚಿಸಿರುವುದಾಗಿ ಸಚಿತಾ ರೈ ವಿರುದ್ಧ ಕುಂಬಳೆ ಪೊಲೀಸರಿಗೆ ದೂರು ಲಭಿಸಿದೆ. ಕಿದೂರು ಪದಕ್ಕಲ್ ನಿವಾಸಿ ನಿಶ್ಮಿತಾ ಶೆಟ್ಟಿ (24) ಎಂಬವರ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಬಾಡೂರು ಎ.ಎಲ್.ಪಿ. ಶಾಲೆಯಲ್ಲಿ ಅಧ್ಯಾಪಿಕೆಯಾದ ಸಚಿತಾ ರೈ ಮಾಜಿ ಡಿವೈಎಫ್‌ಐ ಬ್ಲೋಕ್ ಕಮಿಟಿ ಸದಸ್ಯೆ, ಬಾಲಸಂಘ ಜಿಲ್ಲಾ ಸಮಿತಿ ಸದಸ್ಯೆಯಾಗಿ ಕಾರ್ಯಾಚರಿಸಿದ್ದಳು.

Leave a Reply

Your email address will not be published. Required fields are marked *

You cannot copy content of this page