ಕಾಸರಗೋಡಿನಲ್ಲಿ ಮುದ್ರಿಸಿದ 2000 ರೂ. ಮುಖಬೆಲೆಯ 58.40೦ ಲಕ್ಷ ರೂ. ನಕಲಿ ನೋಟು ವಶ: ಕಾಸರಗೋಡಿನ ಮೂವರು ಸೇರಿ ಐವರ ಬಂಧನ

ಕಾಸರಗೋಡು: ಬೆಂಗಳೂರಿನಲ್ಲಿ ಹಲಸೂರು ಗೇಟ್ ಪೊಲೀಸರು ನಡೆಸಿದ ಮಹತ್ತರ ಕಾರ್ಯಾ ಚರಣೆಯಲ್ಲಿ 2000 ರೂ. ಮುಖಬೆಲೆಯ 52.40 ಲಕ್ಷ ರೂ.ಗಳ ನಕಲಿ ನೋಟನ್ನು ವಶಪಡಿ ಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಕಾಸರಗೋಡಿನ ಮೂವರು ಸೇರಿ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಾಸರಗೋಡು ನಿವಾಸಿಗಳಾದ ಮೊಹಮ್ಮದ್ ಅಫ್ನಾಸ್ (34), ನೂರುದ್ದೀನ್ ಅಲಿಯಾಸ್ ಅನ್ವರ್ (34), ಪ್ರಿಯೇಶ್ (34), ಪಾಂಡಿಚ್ಚೇರಿಯ ಪ್ರಸೀತ್ (47) ಮತ್ತು ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಸಿರಿಗೆರೆ ನಿವಾಸಿ ಎ.ಕೆ. ಅಫ್ಸಲ್ ಹುಸೈನ್ (29) ಬಂಧಿತರಾದ ಆರೋಪಿಗಳು.

ಆರೋಪಿಗಳ ಪೈಕಿ ಅಫ್ಸಲ್ ಹುಸೈನ್  ಬಳ್ಳಾರಿಯಲ್ಲಿ ಗ್ರಾನೈಟ್ ವ್ಯವಹಾರ ನಡೆಸುತ್ತಿದ್ದು ಸೆಪ್ಟಂಬರ್ 9ರಂದು ಆತ 24.68 ಲಕ್ಷರೂ. ಮೌಲ್ಯದ 2000 ರೂ. ಮುಖಬೆಲೆಯ ನಕಲಿ ನೋಟುಗಳನ್ನು ಬೆಂಗಳೂರು ನೃಪತುಂಗ ರಸ್ತೆ ಬಳಿಯ ಭಾರತೀಯ ರಿಸರ್ವ್ ಬ್ಯಾಂಕ್‌ನ  ಶಾಖೆಗೆ ಬಂದಿದ್ದನು. ಅಲ್ಲಿ ಆ ನೋಟನ್ನು ನೀಡಿ 500 ರೂ. ಮುಖಬೆಲೆಯ ನೋಟುಗಳನ್ನು ಪಡೆಯಲೆತ್ನಿಸಿದ್ದನು. ಆ ನೋಟುಗಳ ನೈಜತೆಯನ್ನು ಪರಿಶೀಲಿಸಿದಾಗ ಅದು ನಕಲಿಯಾಗಿರುವುದಾಗಿ ಬ್ಯಾಂಕ್ ಅಧಿಕಾರಿಗಳು ಪತ್ತೆಹಚ್ಚಿದ್ದರು. ಅದರಂತೆ ಬ್ಯಾಂಕ್‌ನ ಎಜಿಎಂ ಭೀಮ್ ಚೌದರಿ ನೀಡಿದ ದೂರಿನಂತೆ  ಹಲಸೂರು ಗೇಟ್ ಪೊಲೀಸರು ಆಗಮಿಸಿ ಅಫ್ಸಲ್ ಹುಸೈನ್‌ನನ್ನು ಖೋಟಾ ನೋಟುಗಳ ಸಹಿತ ವಶಕ್ಕೆ ತೆಗೆದುಕೊಂಡಿದ್ದಾರೆ.  ಆತನನ್ನು ತೀವ್ರ ವಿಚಾರಣೆ ಗೊಳಪಡಿಸಿದಾಗ ಈ ನಕಲಿ ನೋಟು ದಂಧೆಯ ಹಿಂದಿನ ರಹಸ್ಯ ಬಯಲಾಗಿದೆ. ಮಾತ್ರವಲ್ಲ ಆತನಿಂದ ಲಭಿಸಿದ ಮಾಹಿತಿಯನ್ವಯ ಪೊಲೀಸರು ವಿವಿಧೆಡೆ  ಕಾರ್ಯಾಚರಣೆ ನಡೆಸಿ  27.72  ಲಕ್ಷ ರೂ. ಮುಖಬೆಲೆಯ ಖೋಟಾ ನೋಟುಗಳನ್ನು ಪತ್ತೆಹಚ್ಚಿದ್ದಾರೆ. ಮಾತ್ರವಲ್ಲದೆ ನೋಟು ಮುದ್ರಿಸುವ ಯಂತ್ರ, ಪೇಪರ್, ಮೊಬೈಲ್ ಇತ್ಯಾದಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತ ಆರೋಪಿಗಳ  ಪೈಕಿ ಪ್ರಿಯೇಶ್ ಕಳೆದ 20 ವರ್ಷಗಳಿಂದ ಚೆರ್ಕಳದಲ್ಲಿ ಪ್ರಿಂಟಿಂಗ್ ಪ್ರೆಸ್ ನಡೆಸುತ್ತಿದ್ದಾನೆ. ಆತ ಕಲ್ಲಿಕೋಟೆಯಿಂದ ವಿಶೇಷ ಪೇಪರ್ ಹಾಗೂ ನೋಟು ತಯಾರಿಸುವ ಸಾಮಗ್ರಿಗಳನ್ನು ತಂದು ತನ್ನದೇ ಪ್ರಿಂಟಿಂಗ್ ಪ್ರೆಸ್‌ನಲ್ಲಿ ನಕಲಿ ನೋಟುಗಳನ್ನು ಮುದ್ರಿಸಿ ಅದನ್ನು ಇತರರಿಗೆ  ವಿತರಿಸುತ್ತಿದ್ದನೆಂದು ತನಿಖೆಯಲ್ಲಿ ಸ್ಪಷ್ಟಗೊಂಡಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಪ್ರಿಯೇಶನ್‌ನನ್ನು ಇದೇ ರೀತಿಯ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ಮಂಗಳೂರು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದರು ಮಾತ್ರವಲ್ಲ ಬಳಿಕ ಆತನನ್ನು ನ್ಯಾಯಾಂಗ ಬಂಧನಕ್ಕೂ ಒಳಪಡಿಸಲಾಗಿತ್ತು. ಅದಾದ ಬಳಿಕ  ಆತನನ್ನು ಮತ್ತೆ  ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನೋರ್ವ ಆರೋಪಿ ಶಾಮೀಲಾಗಿದ್ದು, ಆತನ ಪತ್ತೆಗಾಗಿ ಪೊಲೀಸರು ವ್ಯಾಪಕ ಶೋಧ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page