ಗಾಂಜಾ ಸಹಿತ ಸೆರೆಗೀಡಾದ ಯುವಕ ಗಂಟೆಗಳೊಳಗೆ ಬಿಡುಗಡೆ: ನಾಗರಿಕರಿಗೆ ಬೆದರಿಕೆಯೊಡ್ಡಿದಾಗ ವಾರಂಟ್ ಪ್ರಕರಣದಲ್ಲಿ ಬಂಧನ

ಕುಂಬಳೆ: ಎರಡು ಪ್ಯಾಕೆಟ್ ಗಾಂಜಾ ಸಹಿತ ನಾಗರಿಕರು ಸೆರೆಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ ಯುವಕ ಗಂಟೆಗಳೊಳಗೆ ಬಿಡುಗಡೆಗೊಂಡನು. ಮರಳಿ ಬಂದು ನಾಗರಿಕರಿಗೆ ಬೆದರಿಕೆಯೊಡ್ಡಿದ ಆರೋಪಿಯನ್ನು ಪೊಲೀಸರು ವಾರಂಟ್ ಪ್ರಕರಣದಲ್ಲಿ ಬಂಧಿಸಿದ್ದಾರೆ.

ಬಂದ್ಯೋಡು ಅಡ್ಕ ಜಂಕ್ಷನ್‌ನ ಬಾಡಿಗೆ ಮನೆಯಲ್ಲಿ ವಾಸಿಸುವ ಫಯಾಸ್ (೨೬) ಎಂಬಾತನನ್ನು ಕುಂಬಳೆ ಪೊಲೀಸರು ಸೆರೆಹಿಡಿದಿ ದ್ದಾರೆ. ಮೊನ್ನೆ ರಾತ್ರಿ ಫಯಾಸ್‌ನನ್ನು ಎರಡು ಪ್ಯಾಕೆಟ್ ಗಾಂಜಾ ಸಹಿತ ನಾಗರಿಕರು ಸೆರೆಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದರು. ಆದರೆ ಗಾಂಜಾ ಸಣ್ಣ ಪ್ರಮಾಣದಲ್ಲಿದೆಯೆಂದು ತಿಳಿಸಿ ಆತನನ್ನು ಪೊಲೀಸರು ಗಂಟೆಗಳೊಳಗೆ ಬಿಡುಗಡೆಗೊಳಿಸಿದ್ದಾರೆ. ಅನಂತರ ಸಮೀರ್ ಎಂಬಾತನ ಮನೆ ಸಮೀಪದಲ್ಲಿ ಗಾಂಜಾ ಮಾರಾಟಕ್ಕೆ ತೊಡಗಿದ ಈತ ಅಲ್ಲಿ ನಾಗರಿಕರಿಗೆ  ಸವಾಲೊಡ್ಡಿ ಬೆದರಿಕೆಯೊಡ್ಡಿದ್ದಾನೆಂದು ತಿಳಿಸಲಾಗಿದೆ. ಇದರಿಂದ ನಾಗರಿಕರು ಆ ಮನೆಗೆ ಸುತ್ತುವರಿದೆ ಫಯಾಸ್‌ನನ್ನು ತಡೆದು ನಿಲ್ಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ತಲುಪಿದ  ಪೊಲೀಸರ ಮುಂದೆಯೂ ಆತ ಬೆದರಿಕೆಯೊಡ್ಡಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಸಂಘರ್ಷಸ್ಥಿತಿ ಸೃಷ್ಟಿಯಾಯಿತು. ಇದರಿಂದ ಪೊಲೀಸರು ಫಯಾಸ್‌ನನ್ನು ಕಸ್ಟಡಿಗೆ  ತೆಗೆದು ಠಾಣೆಗೆ ಕರೆದೊಯ್ದಿದ್ದಾರೆ. ಅನಂತರ ಈ ಹಿಂದೆ ದಾಖಲಿಸಿದ ಹಲ್ಲೆ ಪ್ರಕರಣದಲ್ಲಿ ವಾರಂಟ್ ಆರೋಪಿಯೆಂದು ತಿಳಿಸಿ ಬಂಧಿಸಲಾಗಿದೆ.  ಆದರೆ ಮೊನ್ನೆ ವಾರಂಟ್ ಇರಲಿಲ್ಲವೇ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ. ಇದೇ ವೇಳೆ ಗಾಂಜಾ ಖರೀದಿಸಲು ಬೈಕ್‌ಗಳಲ್ಲಿ ತಲುಪಿದಕೆಲವು ಯುವಕರಿಗೆ ನಾಗರಿಕರು ತಾಕೀತು ನೀಡಿ ಕಳುಹಿಸಿದ ಘಟನೆಯೂ ನಡೆದಿದೆ.

You cannot copy contents of this page