ಕಾಸರಗೋಡಿನಲ್ಲಿ ಮಹೋತ್ಸವವಾದ ವಂದೇ ಭಾರತ್ ರೈಲಿನ ಉದ್ಘಾಟನಾ ಸಮಾರಂಭ

ಕಾಸರಗೋಡು: ಓಣಂ ಹಬ್ಬದ ಸಲುವಾಗಿ ಕೇಂದ್ರ ಸರಕಾರ ಕೇರಳಕ್ಕೆ ಕೊಡುಗೆಯಾಗಿ ನೀಡಿದ ದ್ವಿತೀಯ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಾಡಿಯ ಸೇವೆಯ ಉದ್ಘಾಟನಾ ಸಮಾರಂಭ ನಿನ್ನೆ ಒಂದು ಮಹಾ ಉತ್ಸವವಾಗಿ ಮಾರ್ಪಟ್ಟಿತು.

ಕಾಸರಗೋಡಿನಿಂದ ಆಲಪ್ಪುಳ ದಾರಿಯಾಗಿ ತಿರುವನಂತಪುರ, ಸೇರಿದಂತೆ ೧೧ ರಾಜ್ಯಗಳಲ್ಲಿ ಹೊಸದಾಗಿ ಮಂಜೂರು ಮಾಡಲಾದ ೯ ವಂದೇ ಭಾರತ್ ರೈಲು ಸೇವೆಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಿನ್ನೆ ದಿಲ್ಲಿಯಿಂದಲೇ  ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ವರ್ಚುವಲ್ ಆಗಿ ಚಾಲನೆ ನೀಡಿದರು.

ದೇಶದಲ್ಲಿ ಇಂದು ೨೫ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸೇವೆ ನಡೆಸುತ್ತಿದ್ದು, ಅದರಲ್ಲಿ ಹೊಸದಾಗಿ  ರೈಲುಗಳೂ ಈಗ ಸೇರ್ಪಡೆಗೊಂಡಿವೆ. ಇದರಲ್ಲಿ ಕೇರಳಕ್ಕೆ ಕೇಸರಿ ಬಣ್ಣದ ರೈಲು ಮಂಜೂರು ಮಾಡಲಾಗಿದೆ.

ಇದರ ಉದ್ಘಾಟನಾ ಸಮಾರಂಭ ವನ್ನು ಕಾಸರಗೋಡು ರೈಲು ನಿಲ್ದಾಣದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಪ್ರಯಾಣಿಕರು,  ರಾಜಕೀಯ ನೇತಾರರು, ವಿವಿಧ ಸಂಘಟನೆಗಳು, ವಿದ್ಯಾರ್ಥಿಗಳು ಸೇರಿದಂತೆ ಭಾರೀ ಜನ ಸಂದಣಿಯೇ ಆ ವೇಳೆಯಲ್ಲಿ ನೆರೆದಿತ್ತು.  ಚೆಂಡೆ ಮೇಳ, ಬ್ಯಾಂಡ್ ಹಾಗೂ ಇತರ ವಿವಿಧ ಕಲಾ ರೂಪಗಳನ್ನು ಪ್ರದರ್ಶಿಸಲಾಯಿತು. ಇದು ಈ ಸಮಾರಂಭಕ್ಕೆ ಇನ್ನಷ್ಟು ಮೆರುಗು ನೀಡಿತು. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪುಷ್ಪವೃಷ್ಟಿ ನಡೆಸಲಾಯಿತಲ್ಲದೆ ಹೂವಿನ ಹಾರಗಳಿಂದ ಅಲಂಕರಿಸಲಾಯಿತು. ಇಲ್ಲಿ ನಡೆದ ಕಾರ್ಯಕ್ರಮವನ್ನು ಕೇಂದ್ರ ವಿದೇಶಾಂಗ ಸಹಸಚಿವ ವಿ. ಮುರಳೀಧರನ್ ಉದ್ಘಾಟಿಸಿದರು. ಪ್ರಯಾಣಿಕರಿಗೆ ವಿಶ್ವದರ್ಜೆ ಮಟ್ಟದ ಸೌಕರ್ಯಗಳನ್ನು ಒದಗಿಸುವ ಪ್ರಧಾನಮಂತ್ರಿ ನರೇಂದ್ರಮೋದಿ  ಅವರ ದೃಷ್ಟಿಕೋನವನ್ನು ಸಾಕ್ಷಾತ್ಕಾರ ಗೊಳಿಸುವ ನಿರ್ಣಾಯಕ  ಹೆಜ್ಜೆ ಇದಾಗಿದೆ ಯೆಂದು ಅವರು ಹೇಳಿದರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ರಾಜ್ಯ ಕ್ರೀಡಾ-ಅಲ್ಪ ಸಂಖ್ಯಾತ ಖಾತೆ ಸಚಿವ ಪಿ. ಅಬ್ದುಲ್ ರಹಿಮಾನ್ ಮಾತನಾಡಿದರು. ಸಭೆಯಲ್ಲಿ ಭಾಗವಹಿಸಿದ ಶಾಸಕ ಎನ್.ಎ. ನೆಲ್ಲಿಕುನ್ನು ತನಗೆ ಕಾರ್ಯಕ್ರಮದಲ್ಲಿ  ಮಾತನಾಡಲು ಅವಕಾಶ ನೀಡಲಿಲ್ಲ ವೆಂದು ಹೇಳಿ ಅಸಮಾಧಾನ ವ್ಯಕ್ತಪಡಿಸಿ ದರು.  ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್,   ರಾಜ್ಯ ಕಾರ್ಯದರ್ಶಿ ನ್ಯಾಯವಾದಿ ಕೆ. ಶ್ರೀಕಾಂತ್, ರೈಲ್ವೇ ಪ್ಯಾಸೆಂಜರ್ಸ್ ಅಮಿನಿಟೀಸ್ ಸಮಿತಿಯ ಮಾಜಿ ಅಧ್ಯಕ್ಷ ಪಿ.ಕೆ. ಕೃಷ್ಣದಾಸ್, ರವೀಶ ತಂತ್ರಿ ಕುಂಟಾರು, ವಿವಿಧ ಸಂಘಟನೆಗಳ ನೇತಾರರು, ಕಾಸರಗೋಡು ರೈಲ್ವೇ ಪ್ಯಾಸೆಂಜರ್ಸ್ ಅಸೋಸಿಯೇಶನ್‌ನ ಪದಾಧಿಕಾರಿಗಳು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದರು. ಎಲ್ಲೆಡೆಗಳಲ್ಲಿ ಸಿಹಿತಿಂಡಿ ವಿತರಿಸಲಾಯಿತು.

ನಿನ್ನೆ ಬೆಳಿಗ್ಗೆ ೧೧ ಗಂಟೆಗೆ ಕಾರ್ಯಕ್ರಮ ಆರಂಭಗೊಂಡಿತು. ಸಮಾರಂಭದ ಬಳಿಕ ಮಧ್ಯಾಹ್ನ ೧.೦೫ಕ್ಕೆ  ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ತಿರುವನಂತಪುರದತ್ತ ಪ್ರಯಾಣ ಆರಂಭಿಸಿತು.

You cannot copy contents of this page