ವಿಮಾನಗಳಿಗೆ ತಪ್ಪದ ಹುಸಿ ಬಾಂಬ್ ಕಾಟ: ಮತ್ತೆ 80ಕ್ಕೂ ಹೆಚ್ಚು ಬೆದರಿಕೆ ಕರೆ; ಕಠಿಣ ಕ್ರಮಕ್ಕೆ ಪ್ರಧಾನಿ ಮೋದಿ ನಿರ್ದೇಶ
ನವದೆಹಲಿ: ದೇಶಾದ್ಯಂತ ವಿಮಾನ ಪ್ರಯಾಣಿಕರನ್ನು ಅಡ್ಡಿಪಡಿಸುತ್ತಿರುವ ಹುಸಿ ಬಾಂಬ್ ಬೆದರಿಕೆ ತಪ್ಪದೇ ಇನ್ನೂ ಮುಂದುವರಿಯುತ್ತಿದ್ದು ಕನಿಷ್ಠ 80 ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳಿಗೆ ಮತ್ತೆ ಬಾಂಬ್ ಬೆದರಿಕೆ ಬಂದಿದೆ. ಹೊಸ ಬಾಂಬ್ ಬೆದರಿಕೆಗಳ ಬಗ್ಗೆ ಡಾಟಾವನ್ನು ಹಂಚಿಕೊಳ್ಳಲು ಸರಕಾರ ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್‌ಗಳಾದ ಮೇಟಾ ಮತ್ತು ಎಕ್ಸ್ (ಟ್ವಿಟರ್)ಗಳನ್ನು ಕೇಳಿದೆ. ಕಳೆದ 11 ದಿನಗಳಿಂದ 250ಕ್ಕೂ ಹೆಚ್ಚು ವಿಮಾನಗಳಿಗೆ ಹುಸಿ ಬಾಂಬ್ ಕರೆ ಬಂದಿದೆ. ಇದು ವಿಮಾನ ಸೇವೆಗಳ ಮೇಲೆ ಪ್ರತಿಕೂಲಕರ ಪರಿಣಾಮ ಬೀರತೊಡಗಿದೆ. ವಿಮಾನ ಕಂಪೆನಿಗಳಿಗೆ ನಿರಂತರವಾಗಿ ಹುಸಿ ಬಾಂಬ್ ಬೆದರಿಕೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿ ನರೇಂದ್ರಮೋದಿ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ನಿರ್ದೇಶ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿ ಪ್ರಧಾನಿ ಮೋದಿ ಸಂಬಂಧಪಟ್ಟ ಎಲ್ಲಾ ಇಲಾಖೆಗಳು, ಸಚಿವಾಲಯಗಳು ತನಿಖಾ ಸಂಸ್ಥೆಗಳು ಒಟ್ಟಾಗಿ ಈ ಸಮಸ್ಯೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಅನೇಕ ಹುಸಿ ಬಾಂಬ್‌ಗಳ ಮೂಲವನ್ನು ಕೇಂದ್ರ ಸರಕಾರ ಈಗಾಗಲೇ ಪತ್ತೆಹಚ್ಚಿದೆ. ಮಾತ್ರವಲ್ಲ ಅಂತಹವರನ್ನು ಕಠಿಣ ಕ್ರಮಕ್ಕೂ ಮುಂದಾಗಿದೆ.