೧೦ ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿಗೆ ೮೧ ವರ್ಷ ಸಜೆ, ೩.೫ ಲಕ್ಷ ರೂ. ಜುಲ್ಮಾನೆ
ಕಾಸರಗೋಡು: ಹತ್ತು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪೋಕ್ಸೋ ಪ್ರಕರಣದ ಆರೋಪಿಗೆ ಹೊಸದುರ್ಗ ಸ್ಪೆಷಲ್ ಫಾಸ್ಟ್ ಟ್ರಾಕ್ ನ್ಯಾಯಾಲಯದ ನ್ಯಾಯಧೀಶರಾದ ಸಿ. ಸುರೇಶ್ ಕುಮಾರ್ ಅವರು ಪೋಕ್ಸೋ ಮತ್ತು ಭಾರತೀಯ ಶಿಕ್ಷಾ ಸಂಹಿತೆಯ ವಿವಿಧ ಸೆಕ್ಷನ್‌ಗಳಲ್ಲಾಗಿ ಒಟ್ಟು ೮೧ ವರ್ಷ ಸಜೆ ಮತ್ತು ೩,೬೫,೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಹೊಸದುರ್ಗ ಪುಲ್ಲೂರು ಅಂಬಲತರ ಪುತ್ತನ್ ಪುರಕ್ಕಲ್ ಪಿ.ಟಿ. ಸನ್ನಿ (೫೮) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ.
ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಒಂದು ವರ್ಷ ಒಂಭತ್ತು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆಯೆಂದು ತೀರ್ಪಿನಲ್ಲಿತಿಳಿಸಲಾಗಿದೆ.
೨೦೨೧ ಜೂನ್‌ನಿಂದ ೨೦೨೨ ಮಾರ್ಚ್ ತನಕದ ಅವಧಿಯಲ್ಲಿ ೧೦ ವರ್ಷದ ಬಾಲಕಿಗೆ ಹಲವು ಬಾರಿ ಲೈಂಗಿಕ ಕಿರುಕುಳ ನೀಡಿದ ದೂರಿನಂತೆ ಅಂಬಲತರ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಶಿಕ್ಷೆಯನ್ನು ಆರೋಪಿ ಒಟ್ಟಿಗೆ ಅನುಭವಿಸಿದರೆ ಸಾಕೆಂದು ತೀರ್ಪಿನಲ್ಲಿ ತಿಳಿಸಲಾಗಿದೆ.
ಅಂದು ಅಂಬಲತರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಆಗಿದ್ದ ರಂಜಿತ್ ರವೀಂದ್ರನ್ ಈ ಪ್ರಕರಣದ ಬಗ್ಗೆ ಮೊದಲು ತನಿಖೆ ನಡೆಸಿದ್ದರು. ಬಳಿಕ ಇನ್‌ಸ್ಪೆಕ್ಟರ್ ಟಿ.ಕೆ. ಮುಕುಂದನ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸ್ಪೆಶಲ್ ಪಬ್ಲಿಕ್ ಪ್ರೋಸಿಕ್ಯೂಟರ್ ಎ. ಗಂಗಾಧರನ್ ಪ್ರೋಸಿಕ್ಯೂಶನ್ ಪರ ನ್ಯಾಯಾಲಯದಲ್ಲಿ ವಾದಿಸಿದ್ದರು.