ವಕ್ಫ್ ಕೇಸುಗಳಿಗೆ ಹೊಸ ತಿರುವು: 2013ಕ್ಕಿಂತ ಹಿಂದಿನ ವಕ್ಫ್ ಆಸ್ತಿ ಒತ್ತುವರಿ ಕೇಸು ಅಲ್ಲ-ಹೈಕೋರ್ಟ್‌ನ ಮಹತ್ವದ ತೀರ್ಪು
ತಿರುವನಂತಪುರ: ವಕ್ಫ್ ಮಂಡಳಿ ಆಸ್ತಿ ವಿವಾದ ಕೇರಳ ಸೇರಿದಂತೆ ಇತರ ಹಲವು ರಾಜ್ಯಗಳಲ್ಲಿ ಭಾರೀ ಗದ್ದಲಕ್ಕೆ ದಾರಿ ಮಾಡಿಕೊಟ್ಟಿರುವ ವೇಳೆಯಲ್ಲೇ ಈ ವಿಷಯದಲ್ಲಿ ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಆ ಮೂಲಕ ವಕ್ಫ್ ಕೇಸುಗಳಿಗೆ ಹೊಸ ತಿರುವು ಲಭಿಸಿದಂತಾಗಿದೆ. 2013ರ ವಕ್ಫ್ ತಿದ್ದುಪಡಿ ಕಾಯ್ದೆ ಜ್ಯಾರಿಗೆ ಬರುವ ಮೊದಲು ವಕ್ಫ್ ಆಸ್ತಿ ಒತ್ತುವರಿಯಾಗಿದ್ದರೆ, ಅಂತಹ ಪ್ರಕರಣಗಳಲ್ಲಿ ಪ್ರಕರಣ ದಾಖಲಿಸು ವಂತಿಲ್ಲವೆಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಕೇರಳ ವಕ್ಫ್ ಮಂಡಳಿಯ ಅನುಮತಿಯಿಲ್ಲದೆ ತಮ್ಮ ಕಲ್ಲಿಕೋಟೆ ಮೇರಿಕುನ್ನಿನಲ್ಲಿರುವ ಜಮೀನನ್ನು ಭಾರತೀಯ ಅಂಚೆ ಇಲಾಖೆ ಗುತ್ತಿಗೆ ಆಧಾರದ ಮೇಲೆ ಪಡೆದುಕೊಂಡಿತ್ತೆಂದೂ ಅದನ್ನು ತೆರವುಗೊಳಿಸಬೇಕೆಂದು ವಕ್ಫ್ ಮಂಡಳಿ 2018ರಲ್ಲಿ ಅಂಚೆ ಇಲಾಖೆಗೆ ಸೂಚಿಸಿತ್ತು. ಆದರೂ ಆ ಜಮೀನನ್ನು ವಾಪಾಸು ಮಾಡಿಲ್ಲವೆಂದು ಹೇಳಿ ವಕ್ಫ್ ಮಂಡಳಿ ಅದರ ವಿರುದ್ಧ ಕಲ್ಲಿಕೋಟೆ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಕೇಸು ದಾಖಲಿಸಿತ್ತು. ಅದರ ವಿರುದ್ಧ ಅಂಚೆ ಇಲಾಖೆಯ ಕಲ್ಲಿಕೋಟೆ ವಿಭಾಗದ ಸೀನಿಯರ್ ಸೂಪರಿನ್‌ಟೆಂಡೆಂಟ್ ಹಾಗೂ ಮೇರಿಕುನ್ನು ಸಬ್ ಪೋಸ್ಟ್ ಮಾಸ್ತರ್ ಹೈಕೋರ್ಟ್‌ಗೆ ಮೇಲ್ಮವಿ ಅರ್ಜಿ ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿದ ಹೈಕೋರ್ಟ್‌ನ ನ್ಯಾಯ ಮೂರ್ತಿ ಪಿ.ವಿ. ಕುಂಞಿಕೃಷ್ಣನ್ ಅವರು ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಕ್ಫ್ ಮಂಡಳಿ ದಾಖಲಿಸಿದ ಕೇಸನ್ನು ವಜಾಗೊಳಿಸಿ ತೀರ್ಪು ನೀಡಿದ್ದಾರೆ.
2013ರಲ್ಲಿ ಸೆಕ್ಷನ್ 52-ಎ ಅನ್ನು ಸೇರಿಸಿ ವಕ್ಫ್ ಆಸ್ತಿಗಳ ರಕ್ಷಣೆಗೆ ವಕ್ಫ್ ತಿದ್ದುಪಡಿ ಕಾಯ್ದೆ ಜ್ಯಾರಿಗೆ ತರಲಾಯಿತು. ಆದರೆ ಅದರಲ್ಲಿ ವಕ್ಫ್ ಮಂಡಳಿಯ ಅನುಮತಿ ಪಡೆಯದೇ 2013ಕ್ಕಿಂತ ಮೊದಲು ವಕ್ಫ್ ಜಮೀನನ್ನು ಒತ್ತುವರಿ ಇರಿಸಿಕೊಂಡಿರುವ ವಿರುದ್ಧ ತನಿಖೆ ನಡೆಸಬಹುದೆಂದು ಎಲ್ಲೂ ಹೇಳಿಲ್ಲ ಎಂದು ಹೈಕೋರ್ಟ್‌ನ ಏಕ ಸದಸ್ಯ ಪೀಠ ಹೇಳಿದೆ. ಪ್ರಸ್ತುತ ಕೇಸಿನಲ್ಲಿ ಕಲ್ಲಿಕೋಟೆ ಮೇರಿಕುನ್ನು ಸಬ್ ಅಂಚೆ ಕಚೇರಿ 1999ರಿಂದ ವಕ್ಫ್ ಆಸ್ತಿಯಲ್ಲಿ ಕಾರ್ಯವೆಸಗುತ್ತಿದೆ. ಅಂದರೆ 2013ಕ್ಕಿಂತ ಮೊದಲೇ ಇದು ಕಾರ್ಯವೆಸಗುತ್ತಿದೆ. ಆದ್ದರಿಂದ ಅಂಚೆ ಅಧಿಕಾರಿಗಳ ವಿರುದ್ಧ ಕೇಸು ದಾಖಲಿಸಲು ಸಾಧ್ಯವಾಗದೆಂದೂ ಹೈಕೋರ್ಟ್ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ಹೈಕೋರ್ಟ್‌ನ ಈ ತೀರ್ಪು ವಕ್ಫ್ ಮಂಡಳಿಯ ನಿಲುವಿಗೆ ತೀವ್ರ ತಿರುಗೇಟಾಗಿ ಪರಿಣಮಿಸಿದೆ.