ನಾರಂಪಾಡಿ ನಿವಾಸಿ ಮಹಿಳೆ, ಪುತ್ರನ ದರೋಡೆ:ಆರೋಪಿಗಳಲ್ಲೋರ್ವ ಕೊಲೆ ಪ್ರಕರಣದಲ್ಲಿ ಸೆರೆಗೀಡಾಗಿ ಪರೋಲ್ನಲ್ಲಿ ಬಿಡುಗಡೆಗೊಂಡಾತ
ಬದಿಯಡ್ಕ: ನಾರಂಪಾಡಿ ನಿವಾಸಿ ಮಹಿಳೆ ಹಾಗೂ ಅವರ ಮಗನನ್ನು ಕಟ್ಟಿ ಹಾಕಿದ ಬಳಿಕ ಕೋವಿ ತೋರಿಸಿ ಬೆದರಿಕೆಯೊಡ್ಡಿ ಚಿನ್ನಾಭರಣ ಹಾಗೂ ಹಣ ದರೋಡೆ ನಡೆಸಿದ ಆರೋಪಿಗಳ ತಂಡದಲ್ಲಿ ಪರೋಲ್ನಲ್ಲಿ ಬಿಡುಗಡೆಗೊಂಡ ಕೊಲೆ ಪ್ರಕರಣದ ಆರೋಪಿಯೂ ಒಳಗೊಂಡಿದ್ದಾನೆ. ಕರ್ನಾಟಕ ಪೊಲೀಸ್ನ ಪ್ರತ್ಯೇಕ ತಂಡ ಸೀತಾಂಗೋಳಿ ಬಳಿಯ ಬಾಡೂರಿನಿಂದ ಕಸ್ಟಡಿಗೆ ತೆಗೆದ ಓರ್ವ ಯುವಕನನ್ನು ಸಮಗ್ರವಾಗಿ ತನಿಖೆ ನಡೆಸಿದಾಗ ಬೆಚ್ಚಿ ಬೀಳಿಸುವ ವಿಷಯ ಬಹಿರಂಗಗೊಂಡಿದೆ. ಈ ಹಿನ್ನೆಲೆಯಲ್ಲಿ ದರೋಡೆ ಪ್ರಕರಣದ ತನಿಖೆಯನ್ನು ಕರ್ನಾಟಕ ಪೊಲೀಸರು ಜೈಲಿಗೆ ವಿಸ್ತರಿಸಿದ್ದಾರೆ.
ಈ ತಿಂಗಳ ಮೊದಲ ವಾರ ಬದಿಯಡ್ಕ ಬಳಿಯ ನಾರಂಪಾಡಿಯ ಕಸ್ತೂರಿ ರೈ, ಕರ್ನಾಟಕದ ಸುಳ್ಯಪದವು ಕುದುಕ್ಕೋಡಿ ತೋಟದ ಮೂಲೆಯಲ್ಲಿ ವಾಸಿಸುವ ಪುತ್ರ ಗುರುಪ್ರಸಾದ್ ರೈ ಎಂಬಿವರನ್ನು ದರೋಡೆಗೈಯ್ಯಲಾಗಿದೆ. ಮಧ್ಯರಾತ್ರಿ ವೇಳೆ ಮುಖವಾಡ ಧರಿಸಿ ತಲುಪಿದ ಆರೋಪಿಗಳು ಈ ಕೃತ್ಯವೆಸಗಿದ್ದಾರೆ. ಕಬ್ಬಿಣದ ಸರಳು ಉಪಯೋಗಿಸಿ ಮನೆಯ ಮುಂಭಾಗದ ಬಾಗಿಲು ಮುರಿದು ಒಳ ನುಗ್ಗಿದ ಆರೋಪಿಗಳು ಕಸ್ತೂರಿ ರೈ ಹಾಗೂ ಪುತ್ರನಿಗೆ ಕೋವಿ ತೋರಿಸಿ ಬೆದರಿಕೆ ಒಡ್ಡಿದ ಬಳಿಕ ಅವರನ್ನು ಕಟ್ಟಿ ಹಾಕಿದ್ದಾರೆ. ಈ ಮಧ್ಯೆ ಆರೋಪಿಗಳು ಕಪಾಟಿನ ಬೀಗದ ಕೀಲಿಕೈ ಪಡೆದು ೧೫ ಪವನ್ ಚಿನ್ನಾಭರಣ, ೫೦,೦೦೦ ರೂಪಾಯಿ, ಟಾರ್ಚ್, ಬೈಕ್ನ ಕೀಲಿ ಕೈ ಮೊದಲಾದವುಗಳನ್ನು ಪಡೆದುಕೊಂಡು ಮುಂಜಾನೆ ವೇಳೆ ಅಲ್ಲಿಂದ ಮರಳಿದ್ದಾರೆ. ಗುರುಪ್ರಸಾದ್ ರೈಯವರ ಮೊಬೈಲ್ ಫೋನ್ನ್ನು ದರೋಡೆ ತಂಡ ನೀರಿನಲ್ಲಿ ಮುಳುಗಿಸಿಟ್ಟಿದ್ದು, ಇದರಿಂದ ವಿಷಯವನ್ನು ಇತರರಿಗೆ ತಿಳಿಸಲು ಸಾಧ್ಯವಾಗಿರಲಿಲ್ಲ. ಬೆಳಗಾದ ಬಳಿಕವೇ ಘಟನೆ ಇತರರ ಗಮನಕ್ಕೆ ಬಂದಿದೆ. ಘಟನೆ ಹಿಂದೆ ಅಂತಾರಾಜ್ಯ ನಂಟು ಇದೆ ಎಂಬ ಸೂಚನೆ ಲಭಿಸಿದ ಹಿನ್ನೆಲೆಯಲ್ಲಿ ತನಿಖೆಗಾಗಿ ಪ್ರತ್ಯೇಕ ತಂಡವನ್ನು ನೇಮಿಸಲಾಗಿತ್ತು. ಗುರುಪ್ರಸಾದ್ ರೈಯವರ ಮನೆಯಲ್ಲಿ ಕೆಲಸದಾಳುವಾಗಿದ್ದ ನಾರಂಪಾಡಿ ನಿವಾಸಿಯನ್ನು ಕೇಂದ್ರೀಕರಿಸಿ ಆರಂಭದಲ್ಲಿ ತನಿಖೆ ನಡೆಸಲಾಗಿದೆ. ಆದರೆ ಪ್ರಸ್ತುತ ವ್ಯಕ್ತಿ ಪುತ್ತೂರಿಗೆ ಸಮೀಪ ಕೆಲಸ ನಿರ್ವಹಿಸುತ್ತಿದ್ದಾನೆಂದು ತಿಳಿದು ಬಂದು ಪೊಲೀಸರು ಅಲ್ಲಿಗೆ ತಲುಪಿ ತನಿಖೆಗೊಳಪಡಿಸಿದ್ದರು. ಅನಂತರ ಸೈಬರ್ ಸೆಲ್ನ ಸಹಾಯದೊಂದಿಗೆ ನಡೆಸಿದ ತನಿಖೆಯಲ್ಲಿ ದರೋಡೆಯಲ್ಲಿ ಕಾಸರಗೋಡು ನಿವಾಸಿಗಳು ಭಾಗಿಯಾಗಿದ್ದಾರೆಂಬ ಸ್ಪಷ್ಟ ಸೂಚನೆ ಲಭಿಸಿದೆ. ಅನಂತರ ಕೆಲವು ದಿನಗಳ ಹಿಂದೆ ಪೊಲೀಸ್ ತಂಡ ಬಾಡೂರಿಗೆ ತಲುಪಿ ಓರ್ವನನ್ನು ಕಸ್ಟಡಿಗೆ ತೆಗೆದುಕೊಂಡಿದೆ. ಪ್ರಸ್ತುತ ಯುವಕನನ್ನು ಸಮಗ್ರ ತನಿಖೆಗೊಳಪಡಿಸಿದಾಗ ದರೋಡೆ ಪ್ರಕರಣದಲ್ಲಿ ನಿರ್ಣಾಯಕ ಮಾಹಿತಿ ಲಭಿಸಿದೆ.
ಕೆಲವು ವರ್ಷಗಳ ಹಿಂದೆ ಭಾರೀ ಕೋಲಾಹಲ ಸೃಷ್ಟಿಸಿದ ರಾಜಕೀಯ ಕೊಲೆ ಪ್ರಕರಣವೊಂದರಲ್ಲಿ ಸೆರೆಗೀಡಾಗಿ ಶಿಕ್ಷೆಗೊಳಗಾಗಿ ಜೈಲಿನಲ್ಲಿದ್ದ ಆರೋಪಿಯೂ ದರೋಡೆ ತಂಡದಲ್ಲಿ ಇದ್ದುದಾಗಿ ಯುವಕ ಹೇಳಿಕೆ ನೀಡಿದ್ದಾನೆ. ಪರೋಲ್ನಲ್ಲಿ ಬಿಡುಗಡೆಗೊಂಡ ಆರೋಪಿ ಮರಳಿ ಜೈಲಿಗೆ ಮರಳಬೇಕಾದ ಹಿಂದಿನ ದಿನ ದರೋಡೆ ನಡೆಸಲಾಗಿದೆ. ಮರುದಿನ ಜೈಲಿಗೆ ಮರಳಿ ತಲುಪಿರುವುದಾಗಿ ತನಿಖೆಯಲ್ಲಿ ತಿಳಿದು ಬಂದಿದೆ. ಹೆಚ್ಚಿನ ಮಾಹಿತಿಗಳು ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ ಎಂದು ಪೊಲೀಸರು ನಿರೀಕ್ಷೆಯಿರಿಸಿದ್ದಾರೆ.
ಅಣ್ಣನನ್ನು ಗುಂಡಿಕ್ಕಿ ಕೊಲೆಗೈದ ತಮ್ಮ
ಕೊಚ್ಚಿ: ಸ್ವಂತ ಅಣ್ಣನನ್ನು ತಮ್ಮ ಗುಂಡಿಕ್ಕಿ ಕೊಲೆಗೈದ ಘಟನೆ ಆಲುವದಲ್ಲಿ ನಡೆದಿದೆ. ಆಲುವ ಎಡಯಪುರಂ ತೈಪ್ಪರಂಬಿಲ್ ನಿವಾಸಿ ಪೋಲ್ಸನ್ (೪೮) ಕೊಲೆಗೀಡಾದ ವ್ಯಕ್ತಿ. ಈ ಸಂಬಂಧ ಸಹೋದರ ಥೋಮಸ್ನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿ ದ್ದಾರೆ. ನಿನ್ನೆ ಮಧ್ಯರಾತ್ರಿ ವೇಳೆ ಈ ಘಟನೆ ನಡೆದಿದೆ. ಥೋಮಸ್ ತನ್ನ ಮನೆಯ ಮುಂಭಾಗ ನಿಲ್ಲಿಸಿದ್ದ ಬೈಕ್ನ್ನು ಪೋಲ್ಸನ್ ಹೊಡೆದು ಹಾನಿಗೊಳಿಸಿ ದ್ದರು. ಈ ಬಗ್ಗೆ ಥೋಮಸ್ ಪೊಲೀಸರಿಗೆ ದೂರು ನೀಡಿದ್ದನು. ಈ ವಿಷಯಕ್ಕೆ ಸಂಬಂಧಿಸಿ ಇವರಿಬ್ಬರೊಳಗೆ ದ್ವೇಷ ಹುಟ್ಟಿಕೊಂಡಿತ್ತು. ಈ ಮಧ್ಯೆ ಪೋಲ್ಸನ್ರನ್ನು ಥೋಮಸ್ ಏರ್ ಗನ್ನಿಂದ ಗುಂಡಿಕ್ಕಿ ಕೊಲೆಗೈದಿದ್ದಾನೆ.