ಸಂವಿಧಾನ ವಿರುದ್ಧ ಭಾಷಣ : ಸಚಿವ ಸಜಿ ಚೆರಿಯಾನ್‌ಗೆ ತಿರುಗೇಟು, ಕ್ರೈಂಬ್ರಾಂಚ್ ತನಿಖೆ ನಡೆಸುವಂತೆ ಹೈಕೋರ್ಟ್ ಆದೇಶ
ಕೊಚ್ಚಿ: ಭಾರತೀಯ ಸಂವಿಧಾನವನ್ನು ಅವಹೇಳನಗೈ ಯ್ಯುವ ರೀತಿಯಲ್ಲಿ ಭಾಷಣ ಮಾಡಿದ ರಾಜ್ಯ ಸಾಂಸ್ಕೃತಿಕ ಖಾತೆ ಸಚಿವ ಸಜಿ ಚೆರಿಯಾನ್‌ರ ವಿರುದ್ಧ ಹೊರಿಸಲಾದ ಆರೋಪದ ಬಗ್ಗೆ ಮರು ತನಿಖೆ ನಡೆಸುವಂತೆ ರಾಜ್ಯ ಹೈಕೋರ್ಟ್ ನಿರ್ದೇಶ ನೀಡಿದೆ. ಮಾತ್ರವಲ್ಲ ಈ ಕುರಿತಾದ ತನಿಖೆಯನ್ನು ಕ್ರೈಂಬ್ರಾಂಚ್ ಮೂಲಕ ನಡೆಸುವಂತೆಯೂ ನ್ಯಾಯಾಲಯ ನಿರ್ದೇಶ ನೀಡಿದೆ.
ಹೈಕೋರ್ಟ್‌ನ ಈ ನಿಲುವು ಸಜಿ ಚೆರಿಯಾನ್‌ರಿಗೆ ತಿರುಗೇಟಾಗಿ ಪರಿಣಮಿಸಿದ್ದು, ಅದರಿಂದಾಗಿ ಅವರ ಸಚಿವ ಸ್ಥಾನವನ್ನು ಅಲುಗಾಡಿಸುವಂತೆ ಮಾಡಿದೆ. ಆದರೆ ಅದರ ನೈತಿಕ ಹೊಣೆ ಹೊತ್ತು ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವರೇ ಎಂಬುವುದನ್ನು ಇನ್ನಷ್ಟೇ ಕಾದು ನೋಡಬೇಕಾಗಿದೆ.
ಮುಲ್ಲಪ್ಪಳ್ಳಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಜಿ ಚೆರಿಯಾನ್ ಭಾರತೀಯ ಸಂವಿಧಾನವನ್ನು ಅವಹೇಳನಗೈಯ್ಯುವ ರೀತಿಯ ಹೇಳಿಕೆ ನೀಡಿದ್ದರು. ಆ ಬಗ್ಗೆ ಮೊದಲು ಪೊಲೀಸರು ತನಿಖೆ ನಡೆಸಿ ಸಜಿ ಚೆರಿಯಾನ್‌ಗೆ ಅನುಕೂಲಕರವಾದ ರೀತಿಯ ವರದಿಯನ್ನು ಮೆಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅದನ್ನು ಮೆಜಿಸ್ಟ್ರೇಟ್ ನ್ಯಾಯಾಲಯ ಅಂಗೀಕರಿಸಿತ್ತು. ಅದರ ವಿರುದ್ಧ ಸಲ್ಲಿಸಲಾದ ಮೇಲ್ಮನವಿಯನ್ನು ಪರಿಶೀಲಿಸಿದ ಹೈಕೋರ್ಟ್ ಮೆಜಿಸ್ಟ್ರೇಟ್ ನ್ಯಾಯಾಲಯ ನೀಡಿ ತೀರ್ಪನ್ನು ರದ್ದುಪಡಿಸಿದ್ದು ಮಾತ್ರವಲ್ಲದೆ ಸಜಿ ಚೆರಿಯಾನ್‌ರ ವಿರುದ್ಧದ ಆರೋಪಗಳ ಬಗ್ಗೆ ಮರುತನಿಖೆ ನಡೆಸುವಂತೆ ಇಂದು ಬೆಳಿಗ್ಗೆ ನಿರ್ದೇಶ ನೀಡಿದೆ.
ಫೋರೆನ್ಸಿಕ್ ವರದಿ ಲಭಿಸುವ ಮೊದಲೇ ಪೊಲೀಸರು ಈ ಹಿಂದೆ ತನಿಖೆ ನಡೆಸಿ ಅದರ ಅಂತಿಮ ವರದಿ ಯನ್ನು ಮೆಜಿಸ್ಟ್ರೇಟ್ ನ್ಯಾಯಾಲ ಯಕ್ಕೆ ಸಲ್ಲಿಸಿದ್ದರು. ಅದನ್ನೂ ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಇದೇ ಆರೋಪಕ್ಕೆ ಸಂಬಂಧಿಸಿ ಸಜಿ ಚೆರಿಯಾನ್ ಈ ಹಿಂದೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಆ ಬಗ್ಗೆ ಪೊಲೀಸರು ತನಿಖೆ ನಡೆಸಿ ಮೆಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಿದ್ದ ವರದಿಯ ಬಳಿಕ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಲಾಗಿತ್ತು. ಈಗ ಹೈಕೋರ್ಟ್‌ನ ನಿಲುವು ಅವರ ವಿರುದ್ಧವಾಗಿ ಬಂದಿರುವ ಹಿನ್ನೆಲೆಯಲ್ಲಿ ಅವರಿಗೆ ಮತ್ತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಅನಿವಾರ್ಯತೆ ಉಂಟಾಗಿದೆ.