ಕಾಸರಗೋಡು ನಿವಾಸಿಯ ಕಾರಿನಲ್ಲಿ ಸಾಗಿಸುತ್ತಿದ್ದ ೧.೭೫ ಕೋಟಿ ರೂ. ಕಾಳಧನ ವಶ: ಓರ್ವ ಸೆರೆ, ಇನ್ನೋರ್ವ ಪರಾರಿ

ಕಾಸರಗೋಡು: ಕಾಸರಗೋಡು ನಿವಾಸಿಯ ಕಾರಿನಲ್ಲಿ ಸರಿಯಾದ ದಾಖಲು ಪತ್ರಗಳಿಲ್ಲದೆ ಸಾಗಿಸಲಾಗುತ್ತಿದ್ದ ೧.೭೫ ಕೋಟಿ ರೂ.ವನ್ನು ತಲಶ್ಶೇರಿಯಿಂದ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಮಹಾರಾಷ್ಟ್ರ ಸಾಂಗ್ಲಿ ನಿವಾಸಿ ಸ್ವಪ್ಲಿನ್ ಲಕ್ಷ್ಮಣ್ (೨೭) ಎಂಬಾತನನ್ನು ಬಂಧಿಸಲಾಗಿದೆ. ಆ ವೇಳೆ   ಕಾರಿನಲ್ಲಿದ್ದ ಓರ್ವ ಪೊಲೀಸರ ಕೈಗೆ ಸಿಲುಕದೆ ತಪ್ಪಿಸಿಕೊಂಡಿದ್ದಾನೆ. ಮಾಲು ಪತ್ತೆಯಾದ ಕಾರು ಕಾಸರಗೋಡು ಕ್ಲಾಯಿಕ್ಕೋಡು ನಿವಾಸಿಯದ್ದಾಗಿದೆ ಎಂಬುವುದು ಪೊಲೀಸ್ ತನಿಖೆಯಲ್ಲಿ ಸ್ಪಷ್ಟಗೊಂಡಿದೆ. ಅದರಿಂದಾಗಿ ಆ ಕಾರು ಮಾಲಕನ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಶಪಡಿಸಲಾದ ಹಣ ೫೦೦ ರೂ. ಮತ್ತು ೨೦೦ ರೂ.ಗಳ ನೋಟುಗಳಾಗಿವೆ. ಕಾರಿನಲ್ಲಿ ಗುಪ್ತ ಸೆರೆ ನಿರ್ಮಿಸಿ ಅದರೊಳಗೆ ಈ ಹಣ ಬಚ್ಚಿಡಲಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ. ತಲಶ್ಶೇರಿ ಸಹಕಾರಿ ಆಸ್ಪತ್ರೆ ಬಳಿಯ ರಸ್ತೆಯಲ್ಲಿ ಪೊಲೀಸರು ರಾತ್ರಿ ವಾಹನ ತಪಾಸಣೆಯಲ್ಲಿ ತೊಡಗಿದ್ದ ವೇಳೆ ಆ ದಾರಿಯಾಗಿ ಬಂದ ಕಾರನ್ನು ಪೊಲೀಸರು ತಡೆದು ನಿಲ್ಲಿಸಿ  ತಪಾಸಣೆಗೊಳಪಡಿಸಿದ್ದಾರೆ. ಆಗ ಶಂಕೆಗೊಂಡ ಪೊಲೀಸರು ಅದನ್ನು ಅಲ್ಲೇ ಪಕ್ಕದ ವರ್ಕ್‌ಶಾಪ್‌ಗೆ ಸಾಗಿಸಿ ಕೂಲಂಕುಷವಾಗಿ ತಪಾಸಣೆಗೊಳಪಡಿಸಿದಾಗ ಆ ಕಾರಿನೊಳಗೆ ಗುಪ್ತವಾಗಿ ನಿರ್ಮಿಸಲಾದ ಸೆರೆಯೊಂದು ಗೋಚರಿಸಿದೆ. ಅದನ್ನು ತೆರೆದು ನೋಡಿದಾಗ ಅದರಲ್ಲಿ ಕಾಳಧನ ಬಚ್ಚಿಟ್ಟಿರುವುದು ಪತ್ತೆಯಾಗಿದೆ. ನಂತರ ಆ ಹಣದ ಸಹಿತ ಕಾರನ್ನು ಪೊಲೀಸರು ವಶಕ್ಕೆ ತೆಗೆದು ಠಾಣೆಗೆ ಸಾಗಿಸಿದ್ದಾರೆ. ಆ ವೇಳೆ ಕಾರಿನಿಂದ ಪರಾರಿಯಾದ ವ್ಯಕ್ತಿಯ ಬಗ್ಗೆಯೂ ಪೊಲೀಸರು ಇನ್ನೊಂದೆಡೆ ಶೋಧ ಆರಂಭಿಸಿದ್ದರು.

ಕಾಳಧನ ಪತ್ತೆಯಾದ ವಿಷಯವನ್ನು ತಲಶ್ಶೇರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎಂ. ಅನಿಲ್ ಅವರು ಆದಾಯತೆರಿಗೆ ಮತ್ತು ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್‌ಗೂ ಮಾಹಿತಿ ನೀಡಿದ್ದಾರೆ.  ಅದರಂತೆ ಆ ಎರಡು ಇಲಾಖೆಗಳ ಅಧಿಕಾರಿ ಗಳೂ ಈ ಬಗ್ಗೆ ಇನ್ನೊಂದೆಡೆ ತನಿಖೆ ಆರಂಭಿಸಿದ್ದಾರೆ. ವಶಪಡಿಸಲಾದ ಹಣವನ್ನು  ಇಂದು ನ್ಯಾಯಾಲಯದಲ್ಲಿ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page