ಸಂಪರ್ಕ ಕಡಿದ ಶಿರಿಯದಲ್ಲಿ ಮೇಲ್ಸೇತುವೆ ಬೇಡಿಕೆ : ಅಭಿವೃದ್ಧಿ ಸಮಿತಿಯಿಂದ ನಾಳೆ ಪ್ರತಿಭಟನಾ ಸಂಗಮ
ಕುಂಬಳೆ: ಶಿರಿಯದಲ್ಲಿ ಜನರಿಗೆ ಅತ್ತಿತ್ತ ಸಂಚರಿಸಲು ಮೇಲ್ಸೇತುವೆ ಬೇಕೆಂಬ ಬೇಡಿಕೆಯೊಂದಿಗೆ ಸ್ಛಳೀಯರು ಹೋರಾಟಕ್ಕೆ ಮುಂದಾಗಿದ್ದಾರೆ. ೨೦ ವರ್ಷದ ಹಿಂದೆ ಶಿರಿಯದ ಅಭಿವೃದ್ಧಿಗಾಗಿ ರೂಪೀಕರಿಸಿದ ಶಿರಿಯ ಅಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ಹೋರಾಟ ನಡೆಸಲು ಸಿದ್ಧತೆ ನಡೆಸಲಾಗಿದ್ದು, ಇದರಂತೆ ನಾಳೆ ಸಂಜೆ ಪ್ರತಿಭಟನಾ ಸಂಗಮ ನಡೆಸಲಾಗುವುದೆಂದು ಸಮಿತಿ ಪದಾಧಿಕಾರಿಗಳು ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಾಗ ಶಿರಿಯದ ಪಶ್ಚಿಮ ಭಾಗ ಸಂಪರ್ಕ ಕಡಿದುಕೊಳ್ಳಲಿದೆ ಎಂದು ಸಮಿತಿ ತಿಳಿಸಿದ್ದು, ಜನರ ಸಂಚಾರಕ್ಕೆ ಮೇಲ್ಸೇತುವೆ ಅನಿವಾರ್ಯವೆಂದು ತಿಳಿಸಿದೆ. ಹೆದ್ದಾರಿಯ ಪಶ್ಚಿಮ ಭಾಗದಲ್ಲಿ ಶಿರಿಯ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಸಹಿತ ಹಲವಾರು ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಕೇಂದ್ರಗಳು, ಹಲವಾರು ಮನೆಗಳಿವೆ. ಅಂಗನವಾಡಿ, ಮದ್ರಸಗಳಿವೆ. ಆದರೆ ಹೆದ್ದಾರಿ ನಿರ್ಮಾಣ ಪೂರ್ತಿಗೊಂಡರೆ ಈ ಭಾಗಕ್ಕೆ ತೆರಳಲು ನಾಲ್ಕು ಕಿಲೋ ಮೀಟರ್ ಸುತ್ತಿ ಸಾಗಬೇಕಾಗಿ ಬರಲಿದೆ. ಹೆದ್ದಾರಿ, ರೈಲುಹಳಿಯನ್ನು ದಾಟಲು ಇಲ್ಲಿ ಅಸಾಧ್ಯವಾಗಲಿದೆ.
ಹೆದ್ದಾರಿ ನಿರ್ಮಾಣ ಹಂತದಲ್ಲೇ ಇಲ್ಲಿ ಮೇಲ್ಸೇತುವೆ ನಿರ್ಮಿಸಲು ಆಗ್ರ ಹಿಸಿದ್ದರೂ ಇದುವರೆಗೂ ಯಾವುದೇ ಕ್ರಮ ಉಂಟಾಗಲಿಲ್ಲ. ಅಲ್ಲದೆ ರಾಜಕೀಯ ಮುಖಂಡರು ಕೂಡಾ ಈ ವಿಷಯವನ್ನು ಗಮನಕ್ಕೆ ತೆಗೆದಿಲ್ಲವೆಂದು ಸಮಿತಿ ಪದಾಧಿಕಾರಿಗಳು ದೂರಿದ್ದಾರೆ.
ಮಂಗಲ್ಪಾಡಿ ಪಂ.ನ ೧೪,೧೫ನೇ ವಾರ್ಡ್ಗೊಳಪಟ್ಟ ಈ ಪ್ರದೇಶ ಎರಡು ತುಂಡಾಗಿ ಈಗ ಬದಲಾಗಿದೆ. ಅತ್ತಿತ್ತ ಸಂಚರಿಸಲು ಸಮಸ್ಯೆಯಾಗ ಲಿದ್ದು, ಇದನ್ನು ಸರಿಪಡಿಸಲು ಅಧಿಕಾರಿಗಳು ಮುಂದಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಈ ಬಗ್ಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಅಬ್ಬಾಸ್ ಕೆ.ಎಂ ವಾನಂದೆ, ಶಿರಿಯಾ ಶಾಲಾ ಪಿಟಿಎ ಅಧ್ಯಕ್ಷ ಶಾಫಿ, ಕೋಶಾಧಿಕಾರಿ ಹನೀಫ್, ಉಪಾಧ್ಯಕ್ಷ ಮಹಮ್ಮೂದ್ ಹಾಜಿ, ಸಂಚಾಲಕ ಮಶೂದ್, ಜಲೀಲ್ ಭಾಗವಹಿಸಿದರು.
ಈ ವಿಷಯದ ಬಗ್ಗೆ ಕಳೆದ ೨೦ ರಂದು ಜರಗಿದ ಜಿಲ್ಲಾ ಪಂಚಾಯತ್ ಆಡಳಿತ ಸಮಿತಿ ಸಭೆಯಲ್ಲಿ ತುರ್ತು ಗೊತ್ತುವಳಿ ಮಂಡಿಸಲಾಗಿದೆ.