ಬೈಕ್ಗೆ ಲಾರಿ ಢಿಕ್ಕಿ ಹೊಡೆದು ವಿದ್ಯಾರ್ಥಿನಿ ಮೃತ್ಯು: ಸಹೋದರನಿಗೆ ಗಂಭೀರ
ಕಾಸರಗೋಡು: ಬೈಕ್ಗೆ ಲಾರಿ ಢಿಕ್ಕಿ ಹೊಡೆದು ಕಾಲೇಜು ವಿದ್ಯಾರ್ಥಿನಿ ಮೃತಪಟ್ಟ ಘಟನೆ ನಡೆದಿದೆ. ಚೆರುವತ್ತೂರು ತುರುತ್ತಿ ಪಳ್ಳಿಕಂಡದ ಅಬ್ದುರಹಿಮಾನ್ರ ಪುತ್ರಿ ಫಾತಿಮತ್ ರಹೀಸ (22) ಎಂಬಾಕೆ ಮೃತಪಟ್ಟ ದುರ್ದೈವಿ. ಬೈಕ್ ಚಲಾಯಿಸುತ್ತಿದ್ದ ಸಹೋದರ ಫೈಸಲ್ (29) ಗಂಭೀರ ಗಾಯಗೊಂಡಿದ್ದಾರೆ. ನಿನ್ನೆ ರಾತ್ರಿ 10.30ರ ವೇಳೆ ಪಿಲಿಕ್ಕೋಡ್ ತೋಟಂ ಗೇಟ್ ಸಮೀಪ ಅಪಘಾತವುಂಟಾಗಿದೆ. ಅಡುಗೆ ಅನಿಲ ಸಾಗಾಟ ಲಾರಿ ಬೈಕ್ಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ರಹೀಸ ಹಾಗೂ ಫೈಸಲ್ ಸಂಬಂಧಿಕರ ಮದುವೆ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಮರಳಿ ಮನೆಗೆ ತೆರಳುತ್ತಿದ್ದಾಗ ಲಾರಿ ಢಿಕ್ಕಿ ಹೊಡೆದಿದೆ. ಬೈಕ್ ರಸ್ತೆಗೆಸೆಯಲ್ಪಟ್ಟು ಕೂಡಲೇ ಈ ಇಬ್ಬರನ್ನು ಸ್ಥಳೀಯರು ಆಸ್ಪತ್ರೆಗೆ ತಲುಪಿಸಿದರೂ ಅಷ್ಟರಲ್ಲಿ ರಹೀಸ ಮೃತಪಟ್ಟಿದ್ದಳು. ಮೃತ ರಹೀಸ ತೃಕ್ಕರಿಪುರದ ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್, ವಿದ್ಯಾರ್ಥಿನಿ ಯಾಗಿದ್ದಳು. ಅಪಘಾತಕ್ಕೆ ಸಂಬಂಧಿಸಿ ಲಾರಿ ಚಾಲಕ ಟಿ.ಎನ್. ಅಭಿನಂದನ್ ವಿರುದ್ಧ ಚಂದೇರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.