ಫೆಂಜಲ್ ಚಂಡಮಾರುತ : ಜಡಿ ಮಳೆಯ ಮುನ್ನೆಚ್ಚರಿಕೆ: ಕಾಸರಗೋಡು ಸೇರಿ ಐದು ಜಿಲ್ಲೆಗಳಲ್ಲಿ ರೆಡ್ ಅಲರ್ಟ್
ಕಾಸರಗೋಡು: ಫೆಂಜಲ್ ಚಂಡ ಮಾರುತದ ಪ್ರಭಾವದಿಂದಾಗಿ ರಾಜ್ಯದಲ್ಲಿ ಅತೀ ತೀವ್ರ ಮಳೆ ಸುರಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರಿಂದಾಗಿ ಕಾಸರಗೋಡು, ಕಣ್ಣೂರು, ವಯನಾಡ್, ಕಲ್ಲಿಕೋಟೆ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಕೇಂದ್ರ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಅಲ್ಲದೆ ಕಣ್ಣೂರು, ವಯನಾಡ್, ಇಡುಕ್ಕಿ, ಕೋಟ್ಟಯಂ ಮತ್ತು ಪತ್ತನಂತಿಟ್ಟ ಜಿಲ್ಲೆಗಳ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ ರಜೆ ಘೋಷಿಸಲಾಗಿದೆ. ಆದರೆ ಪೂರ್ವನಿಗದಿಯಾಗಿರುವ ಪರೀಕ್ಷೆಗಳಿಗೆ ರಜೆ ಅನ್ವಯಗೊಳಿಸಲಾಗಿಲ್ಲ.
ಇದೇ ವೇಳೆ ಪಾಲ್ಘಾಟ್, ತೃಶೂರು ಮತ್ತು ಎರ್ನಾಕುಳಂ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳ ಹಲವೆಡೆಗಳಲ್ಲಿ ಅತೀ ತೀವ್ರ ಮಳೆ ಸುರಿಯುವ ಸಾಧ್ಯತೆ ಇದೆ ಎಂದೂ, ಅದರಿಂದಾಗಿ ಜನರು ಗರಿಷ್ಠ ಜಾಗ್ರತೆ ಪಾಲಿಸಬೇಕೆಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಜಡಿ ಮಳೆಯ ಹಿನ್ನೆಲೆಯಲ್ಲಿ ಭೂಕುಸಿತ ಮತ್ತು ಭಾರೀ ಪ್ರವಾಹಕ್ಕೂ ಸಾಧ್ಯತೆ ಇದೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರವೂ ಮುನ್ನೆಚ್ಚರಿಕೆ ನೀಡಿದೆ. ಮಲೆನಾಡು ಪ್ರದೇಶಗಳಲ್ಲಿ ಇಂತಹ ಸಾಧ್ಯತೆ ಅತೀ ಹೆಚ್ಚಿರುವ ಹಿನ್ನೆಲೆಯಲ್ಲಿ ಅಂತಹ ಪ್ರದೇಶಗಳಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಡೆಸದಿ ರುವಂತೆಯೂ ನಿರ್ದೇಶ ನೀಡಲಾಗಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ದೈನಂದಿನ ೨೪ ತಾಸುಗಳ ತನಕ ಕಾರ್ಯವೆಸಗುವ ತಾಲೂಕು ಮತ್ತು ಜಿಲ್ಲಾ ಮಟ್ಟದ ಕಂಟ್ರೋಲ್ ರೂಮ್‌ಗಳನ್ನು ತೆರೆಯಲಾಗಿದೆ. ದುರಂತ ಉಂಟಾಗುವ ಸಾಧ್ಯತೆ ಇದ್ದಲ್ಲಿ ಅದನ್ನು ಜನರು 1077 ಅಥವಾ 1070 ಎಂಬ ಫ್ರೀ ಟೋಲ್ ನಂಬ್ರಕ್ಕೆ ಕರೆದು ತುರ್ತು ಮಾಹಿತಿ ನೀಡಬಹುದಾಗಿದೆ. ಮುಂಜಾಗ್ರತಾ ಕ್ರಮದ ಭಾಗವಾಹಿ ವಿಪತ್ತು ನಿರ್ವಹಣಾ ಪಡೆಯನ್ನೂ ಎಲ್ಲೆಡೆ ಸಿದ್ಧಪಡಿಸಲಾಗಿದೆ.
ಶಬರಿಮಲೆಯಲ್ಲಿ ಮೊನ್ನೆಯಿಂದ ಭಾರೀ ಮಳೆ ಸುರಿಯುತ್ತಿದ್ದರೂ, ಅದು ತೀರ್ಥಾಟಕರ ದರ್ಶನದ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ. ಆದರೆ ಪಂಪಾ ನದಿಯಲ್ಲಿ ಸ್ನಾನ ಮಾಡುವುದಕ್ಕೆ ನಿಯಂತ್ರಣ ಹೇರಲಾಗಿದೆ. ಕಾನನ ದಾರಿ ಮೂಲಕ ಮಲೆಯೇರುವಿಕೆಗೆ ನಿಷೇಧ ಹೇರಲಾಗಿದೆ.
ಫೆಂಜಲ್ ಚಂಡಮಾರುತ ಸೃಷ್ಟಿಸಿದ ಭೂ ಕುಸಿತ ಹಾಗೂ ಪ್ರವಾಹದಿಂದ ತಮಿಳುನಾಡಿನ ತಿರುವಣ್ಣಾ ಮಲೈಯಲ್ಲಿ ಮಕ್ಕಳೂ ಸೇರಿದಂತೆ ಏಳು ಮಂದಿ ನಾಪತ್ತೆಯಾಗಿದ್ದಾರೆ. ಅವರ ಪತ್ತೆಗಾಗಿ ವ್ಯಾಪಕ ಶೋಧ ಆರಂಭಿಸಲಾಗಿದೆ. ಈ ಪ್ರದೇಶದಲ್ಲಿ ಭಾರೀ ನಾಶನಷ್ಟವೂ ಉಂಟಾಗಿದೆ. ತಮಿಳುನಾಡಿನ ಹೊರತಾಗಿ ಕರ್ನಾಟಕ, ಪುದುಚ್ಚೇರಿ ಯಲ್ಲೂ ಭಾರೀ ಮಳೆ ಸುರಿಯುತ್ತಿದೆ. ಜಲ ಪ್ರವಾಹದಿಂದಾಗಿ ರೈಲು ಹಳಿಗಳು ಮುಳುಗಿರುವ ಹಿನ್ನೆಲೆ ಯಲ್ಲಿ ತಮಿಳುನಾಡಿನ 10 ರೈಲು ಸೇವೆಗಳನ್ನು ರದ್ದುಪಡಿಸಲಾಗಿದೆ. 10 ರೈಲುಗಳ ಬೇರೆ ದಾರಿ ಮೂಲಕ ಸೇವೆ ನಡೆಸುತ್ತಿವೆ. ತಮಿಳುನಾಡಿನ 9 ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಆ ಜಿಲ್ಲೆಗಳಿಗೆ ರಜೆ ಸಾರಲಾಗಿದೆ.