ಅಡ್ಕತ್ತಬೈಲ್‌ಲ್ಲಿ ಮನೆಯ ಛಾವಣಿ ಸಂಪೂರ್ಣ ಕುಸಿತ: ದಿಕ್ಕೆಟ್ಟ ಕುಟುಂಬ
ಕಾಸರಗೋಡು: ಅಡ್ಕತ್ತಬೈಲು ಶಾಲೆಯ ಹಿಂದುಗಡೆ ಇರುವ ಹಳೆಯ ಹೆಂಚಿನ ಮನೆಯೊಂದು ಇಂದು ಬೆಳಿಗ್ಗೆ ಕುಸಿದಿದ್ದು, ಕುಟುಂಬ ತತ್ತರಿಸಿದೆ. ಕಿಶೋರ್ ಕುಮಾರ್, ಶಶಿಕಲಾ ದಂಪತಿಯ ಹಳೆಯ ಮನೆ ಇದಾಗಿದ್ದು, ಇಂದು ಬೆಳಿಗ್ಗೆ ಸುಮಾರು ೬ ಗಂಟೆ ವೇಳೆ ಮನೆಯ ಛಾವಣಿ ಸಂಪೂರ್ಣ ಕುಸಿದಿದೆ. ಮನೆ ಈ ಮೊದಲೇ ಸೋರುತ್ತಿದ್ದ ಹಿನ್ನೆಲೆಯಲ್ಲಿ ಅದಕ್ಕೆ ಟರ್ಪಲ್ ಹಾಕಲಾಗಿತ್ತು. ಆದರೆ ಮಾಡು ಜೀರ್ಣಗೊಂಡ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಬಿದ್ದಿದೆ. ಆದರೆ ಹಳೆಮನೆಯಲ್ಲಿ ಅಟ್ಟ ಇದ್ದು, ಮಾಡು ಕುಸಿದರೂ ಒಳಗೆ ಬೀಳದ ಕಾರಣ ಮನೆಯಲ್ಲಿದ್ದ ಗಂಡ ಹೆಂಡತಿ ಅಪಾಯವಿಲ್ಲದೆ ಪಾರಾಗಿದ್ದಾರೆ. ಕೇವಲ ಸರಕಾರದ ಕ್ಷೇಮ ಪಿಂಚಣಿಯಿಂದ ಜೀವನ ನಡೆಸುವ ಇವರ ಬದುಕು ಈಗ ಸಂಕಷ್ಟದಲ್ಲಾಗಿದೆ. ಹೆಂಚು, ಪಕ್ಕಾಸು ಸಹಿತ ಛಾವಣಿ ಸಂಪೂರ್ಣ ಕುಸಿದ ಕಾರಣ ಇನ್ನು ಈ ಮನೆಯಲ್ಲಿ ವಾಸ ಅಸಾಧ್ಯವಾಗಿದೆ. ಈ ಮೊದಲು ದುರಸ್ತಿಗಾಗಿ ನಗರಸಭೆಗೆ ಮನವಿ ನೀಡಿದ್ದರೂ ಫಂಡ್ ಇಲ್ಲ ಎಂಬ ಕಾರಣದಿಂದ ದುರಸ್ತಿ ಬಾಕಿಯಾಗಿತ್ತೆಂದು ತಿಳಿಸಲಾಗಿದೆ. ಈಗಾಗಲೇ ದುರಸ್ತಿಗೊಳಿಸಿದ್ದರೆ ಈ ಮನೆಗೆ ಈ ಗತಿ ಬರುತ್ತಿರಲಿಲ್ಲವೆಂದು ಸ್ಥಳೀಯರು ತಿಳಿಸುತ್ತಾರೆ.