ನಗರಸಭಾ ಕಚೇರಿಯಲ್ಲಿ ಸಿಬ್ಬಂದಿಗಳ ಮುಂದೆ ಕಾರ್ಯದರ್ಶಿಗೆ ಹಲ್ಲೆ; . ನೌಕರರಿಂದ ತೀವ್ರ ಪ್ರತಿಭಟನೆ
ಕಾಸರಗೋಡು: ಕಾಸರಗೋಡು ನಗರಸಭಾ ಕಚೇರಿಯಲ್ಲಿ ನಗರಸಭಾ ಕಾರ್ಯದರ್ಶಿ ಪಿ.ಎ. ಜಸ್ಟಿನ್‌ರ ಮೇಲೆ ಸಿಬ್ಬಂದಿಗಳ ಮುಂದೆಯೇ ಇಬ್ಬರು ಸೇರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಈ ಬಗ್ಗೆ ನಗರಸಭಾ ಕಾರ್ಯದರ್ಶಿಯವರು ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಗೆ ದೂರು ನೀಡಿದ್ದಾರೆ. ಅದರಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಶುಕ್ರವಾರ ಸಂಜೆ ಈ ಘಟನೆ ನಡೆದಿದೆ. ತಳಂಗರೆಯ ಕಟ್ಟಡವೊಂ ದಕ್ಕೆ ನಕಲಿ ಸಹಿ ಹಾಕಿ ಅದಕ್ಕೆ ಕಟ್ಟಡ ನಂಬ್ರ ಪಡೆದಿರುವುದನ್ನು ನಗರಸಭಾ ಕಾರ್ಯದರ್ಶಿ ಪತ್ತೆಹಚ್ಚಿ ಬಳಿಕ ಅದನ್ನು ರದ್ದುಗೊಳಿಸಿದ್ದರು. ಅದನ್ನು ಪ್ರಶ್ನಿಸಿ ಇಬ್ಬರು ನಗರಸಭಾ ಕಚೇರಿಗೆ ಬಂದು ಕಾರ್ಯದರ್ಶಿ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದ. ಹಲ್ಲೆ ನಡೆಸಿದ ದೃಶ್ಯ ಕಚೇರಿಯ ಸಿಸಿ ಟಿವಿ ಕ್ಯಾಮರಾದಲ್ಲಿ ಚಿತ್ರೀಕರಿಸಲ್ಪಟ್ಟಿದೆ ಯೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದ್ದು, ಅದರ ದೃಶ್ಯಗಳನ್ನು ಪೊಲೀಸರು ಪರಿಶೀಲಿಸತೊಡಗಿದ್ದಾರೆ.
ತಳಂಗರೆಯ ಕಟ್ಟಡವೊಂದನ್ನು ಆಂಶಿಕವಾಗಿ ಉಪಯೋಗಿಸಲು ನಾನು ಅನುಮತಿ ನೀಡಿದ್ದೆ. ಆ ಕಟ್ಟಡ ೫೮೦ ಸ್ಕ್ವಾರ್ ಫೀಟ್ ವಿಸ್ತೀರ್ಣಕ್ಕೆ ಅನುಮತಿ ನೀಡಲಾಗಿತ್ತು. ಆದರೆ ಆ ಕಡತವನ್ನು ಬಳಿಕ ಪರಿಶೀಲಿಸಿದಾಗ ಆ ಕಟ್ಟಡ ೮೯೨.೯ ಸ್ಕ್ವಾರ್ ಫೀಟ್ ವಿಸ್ತೀರ್ಣ ಹೊಂದಿದ್ದು, ಅದನ್ನು ಪೂರ್ಣವಾಗಿ ಉಪಯೋಗಿಸಲು ನಾನು ಅನುಮತಿ ನೀಡಿದ್ದೇನೆ ಎಂಬ ರೀತಿಯ ನಕಲಿ ದಾಖಲೆ ಪತ್ರ ತಯಾರಿಸಿ, ಅದಕ್ಕೆ ನನ್ನ ನಕಲಿ ಸಹಿ ಹಾಕಿರುವುದು ಪತ್ತೆಯಾಗಿದೆಯೆಂದೂ, ಅದನ್ನು ಪ್ರಶ್ನಿಸಿದಾಗ ಇಬ್ಬರು ನನ್ನ ಮೇಲೆ ಹಲ್ಲೆ ನಡೆಸಿದರೆಂದು ದೂರಿನಲ್ಲಿ ಕಾರ್ಯದರ್ಶಿ ಆರೋಪಿಸಿದ್ದಾರೆ. ಮಾತ್ರವಲ್ಲ ಹಲ್ಲೆ ಬಗ್ಗೆ ದೂರು ನೀಡಿದ ನಗರಸಭಾ ಕಾರ್ಯದರ್ಶಿ ನಂತರ ತಮ್ಮ ಊರಾದ ಆಲಪ್ಪುಳಕ್ಕೆ ತೆರಳಿದ್ದಾರೆ. ನಗರಸಭಾ ಕಾರ್ಯದರ್ಶಿ ಮೇಲೆ ನಡೆಸಿದ ಹಲ್ಲೆಯನ್ನು ಪ್ರತಿಭಟಿಸಿ ನಗರಸಭಾ ಸಿಬ್ಬಂದಿಗಳು ಅದೇ ದಿನ ನಗರಸಭಾ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು. ಹಲ್ಲೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಪಟ್ಟಿದ್ದಾರೆ.