ಕೇರಳ ಸೇರಿ ಏಳು ರಾಜ್ಯಗಳಲ್ಲಿ ಭಾರೀ ಮಳೆಯ ಮುನ್ಸೂಚನೆ
ತಿರುವನಂತಪುರ: ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ ರೂಪುಗೊಂಡಿದ್ದು, ಇದರಿಂದಾಗಿ ಕೇರಳ ಸೇರಿದಂತೆ ಏಳು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮತ್ತೊಮ್ಮೆ ಸೈಕ್ಲೋನಿಕ್ ಚಂಡಮಾರುತ ಮರಳಲಿದೆ. ಇದರಿಂದಾಗಿ ಈ ಏಳು ರಾಜ್ಯಗಳು ಜಾಗ್ರತೆ ಪಾಲಿಸುವಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಶ್ರೀಲಂಕಾ ಕರಾವಳಿಯಲ್ಲಿ ಬಂಗಾಳಕೊಲ್ಲಿಯ ನೈಋತ್ಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿ ಅಲ್ಲಿ ಭಾರೀ ಚಂಡಮಾರುತ ರೂಪುಗೊಂಡಿದೆ. ಮುಂದಿನ ೨೪ಗಂಟೆಗಳಲ್ಲಿ ಇದು ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಶ್ರೀಲಂಕಾ -ತಮಿಳುನಾಡು ಕರಾವಳಿಯತ್ತ ಸಾಗಲಿದೆ. ಇದರ ಪರಿಣಾಮ ಕೇರಳ, ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಭಾರೀ ಮಳೆಯಾಗಲಿದೆ. ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಕೆಲವೆಡೆ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಇದರಂತೆ ಕೇರಳದ ಎರ್ನಾಕುಳಂ, ಇಡುಕ್ಕಿ ಮತ್ತು ತೃಶೂರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉಳಿದೆಡೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.