ಪೂವಡ್ಕ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷ
ಮುಳ್ಳೇರಿಯ: ಪೂವಡ್ಕದಲ್ಲಿ ನಿನ್ನೆ ರಾತ್ರಿ ಚಿರತೆ ಕಾಣಿಸಿಕೊಂ ಡಿರುವುದಾಗಿ ಹೇಳಲಾಗುತ್ತಿದ್ದು, ಇದರಿಂದ ನಾಡಿನಲ್ಲಿ ಮತ್ತೆ ಆತಂಕ ಹುಟ್ಟಿಕೊಂಡಿದೆ. ನಿನ್ನೆ ರಾತ್ರಿ 7 ಗಂಟೆಗೆ ರಾಜ್ಯ ರಸ್ತೆಯಲ್ಲಿ ಚಿರತೆ ಕಂಡು ಬಂದಿದೆ. ಕಾರಡ್ಕ ಜಿವಿಎಚ್ಎಸ್ಎಸ್ನ ಪಿಟಿಎ ಅಧ್ಯಕ್ಷ ಕೊಟ್ಟಂಗುಳಿಯ ಕೆ. ಸುರೇಶ್ ಕುಮಾರ್ರ ಕಾರಿಗೆ ಅಡ್ಡವಾಗಿ ಚಿರತೆ ಓಡಿದೆ. ಅನಂತರ ಪೂವಡ್ಕದಲ್ಲಿ ಟವರ್ ನಿರ್ಮಾಣ ನಡೆಯುವ ಭಾಗದತ್ತ ಸಾಗಿತ್ತು. ಕೊನೆಗೆ ಪೂವಡ್ಕದ ನಟರಾಜ ನಾಕ್ರ ತೋಟದತ್ತ ಸಾಗುತ್ತಿರುವುದನ್ನು ಕಂಡಿರುವುದಾಗಿಯೂ ನಾಗರಿಕರು ತಿಳಿಸುತ್ತಿದ್ದಾರೆ. ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ತಿಳಿಸಲಾಗಿದೆ. ಈ ಭಾಗದ ಕಾಡು ಪ್ರದೇಶದಲ್ಲಿ ಚಿರತೆ ಪದೇ ಪದೇ ಕಾಣಿಸುತ್ತಿದೆಯಾದರೂ ವಾಹನಗಳು ನಿರಂತರ ಸಂಚರಿಸುವ ರಾಜ್ಯ ರಸ್ತೆಯಲ್ಲಿ ಚಿರತೆ ಇದೇ ಮೊದಲ ಬಾರಿ ಕಾಣಿಸಿದೆ. ಈ ಭಾಗದ ಕಾಡು ಪ್ರದೇಶದಲ್ಲಿ ಇತ್ತೀಚೆಗೆ ಚಿರತೆ ಕಂಡು ಬಂದಿತ್ತು. ಕೋಟ್ಟಂಗುಳಿ ಭಾಗದಲ್ಲಿ ಚಿರತೆ ಬೀಡು ಬಿಟ್ಟಿದೆ ಎಂದು ನಾಗರಿಕರು ತಿಳಿಸುತ್ತಿದ್ದಾರೆ. ಇನ್ನೂ ಎರಡು ಚಿರತೆಗಳು ಇರುವುದಾಗಿ ಸಂಶಯಿಸಲಾಗುತ್ತಿದೆಯೆಂದೂ ಹೇಳಲಾಗುತ್ತಿದೆ.